
“ಆದೇಶದಲ್ಲಿ ‘ಆರ್ಎಸ್ಎಸ್’ ಪದವೇ ಇಲ್ಲ; ಸಿಎಂ ಹೇಳಿಕೆ ಬಾಲಿಶ”: ಜಗದೀಶ ಶೆಟ್ಟರ್ ತಿರುಗೇಟು
ಧಾರವಾಡ/ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕುರಿತು ರಾಜ್ಯ ಸರ್ಕಾರದ ನಡೆಯನ್ನು ಸಂಸದ ಮತ್ತು ಮಾಜಿ ಮುಖ್ಯಮಂತ್ರಿಯ ಜಗದೀಶ ಶೆಟ್ಟರ್ ಅವರು ತೀವ್ರವಾಗಿ ಖಂಡಿಸಿದ್ದು, ಆರ್ಎಸ್ಎಸ್ಗೆ ಸಂಬಂಧಿಸಿದ ‘ನಿಷೇಧ ಆದೇಶ’ದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ (ಸೋಮವಾರ) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೆಟ್ಟರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದರು.
ಆದೇಶದಲ್ಲಿ ‘ಆರ್ಎಸ್ಎಸ್’ ಪದವಿಲ್ಲ:
“2013ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಇಲಾಖೆಯ ಜಾಗದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಲಾಗಿತ್ತು. ಆದರೆ, ಆ ಆದೇಶದಲ್ಲಿ ಎಲ್ಲಿಯೂ ‘ಆರ್ಎಸ್ಎಸ್’ ಪದವನ್ನೇ ಬಳಸಿಲ್ಲ. ನಾನು ಸಿಎಂ ಆಗಿದ್ದಾಗ ಆದೇಶ ಮಾಡಿರುವುದನ್ನೇ ಮುಂದುವರೆಸಿರುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಅವರು ಆ ಆದೇಶವನ್ನು ಸರಿಯಾಗಿ ಓದಿದ್ದಾರಾ?” ಎಂದು ಶೆಟ್ಟರ್ ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರ ಟೀಕೆ ಬಾಲಿಶ:
“ಆರ್ಎಸ್ಎಸ್ ದೇಶವನ್ನು ಕಟ್ಟುವ ಕೆಲಸ ಮಾಡುತ್ತ ಬಂದಿದೆ. ನೂರು ವರ್ಷ ಪೂರೈಸಿದ ಈ ಸಂದರ್ಭದಲ್ಲಿ ದೇಶದ ಯುವಶಕ್ತಿಯನ್ನು ಒಗ್ಗೂಡಿಸುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ನಾಯಕರು ಹಗಲು-ರಾತ್ರಿ ಆರ್ಎಸ್ಎಸ್ ವಿರುದ್ಧ ಮಾತನಾಡುತ್ತಿದ್ದಾರೆ” ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿ ಮಾತನಾಡಿದ ಅವರು, “ಪ್ರಿಯಾಂಕ್ ಖರ್ಗೆ ಅವರ ಬಾಲಿಶ ಬುದ್ಧಿ ಮತ್ತು ಅಹಂಕಾರದ ಮಾತುಗಳಿಂದಲೇ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋತರು. ಆದರೂ ಅವರಿಗೆ ಕನಿಷ್ಠ ಬುದ್ಧಿ ಬಂದಿಲ್ಲ. ಆರ್ಎಸ್ಎಸ್ ಬಗ್ಗೆ ಮಾತನಾಡಿದರೆ ಮಾತ್ರ ಸಮಾಜದಲ್ಲಿ ಹೆಸರು ಉಳಿಯುತ್ತದೆ ಎಂಬ ಭ್ರಮೆ ಅವರಿಗೆ ಇದೆ” ಎಂದು ಟೀಕಿಸಿದರು.
‘ಆರ್ಎಸ್ಎಸ್ ಎದುರು ಹಾಕಿಕೊಂಡವರು ಭಸ್ಮ’:
ಇದೇ ವೇಳೆ, ಆರ್ಎಸ್ಎಸ್ ಕುರಿತಂತೆ ಕಾಂಗ್ರೆಸ್ ನಾಯಕರ ಟೀಕೆಗಳು ಮುಸ್ಲಿಂ ಸಮುದಾಯವನ್ನು ಓಲೈಸುವ ಭಾಗ ಎಂದು ಆರೋಪಿಸಿದ ಶೆಟ್ಟರ್, “ಆರ್ಎಸ್ಎಸ್ ಅನ್ನು ಎದುರು ಹಾಕಿಕೊಂಡವರು ಭಸ್ಮ ಆಗಲಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅಂತಿಮ ಕ್ಷಣ ಬಂದಿದ್ದು, ದೀಪ ಆರುವಾಗ ಜೋರಾಗಿ ಉರಿಯುತ್ತದೆ ಎಂಬಂತೆ ಸರ್ಕಾರದ ಪರಿಸ್ಥಿತಿ ಇದೆ” ಎಂದು ಶಾಪ ಹಾಕಿದರು.
ಕೇಂದ್ರದ ಆದೇಶ ಸ್ಪಷ್ಟೀಕರಣ:
“1966 ರಲ್ಲಿ ನೆಹರೂ ಅವರು ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಸರಕಾರಿ ನೌಕರರು ಭಾಗವಹಿಸಬಾರದು ಎಂದು ಆದೇಶಿಸಿದ್ದರು. ಆದರೆ, 2024ರ ಜುಲೈ 9 ರಂದು ಕೇಂದ್ರ ಸರ್ಕಾರ ಈ ಆದೇಶದಿಂದ ಆರ್ಎಸ್ಎಸ್ ಹೆಸರನ್ನು ತೆಗೆದುಹಾಕಿ, ಸರ್ಕಾರಿ ನೌಕರರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ಆದರೂ, ರಾಜ್ಯ ಸರ್ಕಾರ ಹಳೆಯ ನಿಯಮಗಳ ಬಗ್ಗೆ ಮಾತನಾಡುತ್ತಿದೆ” ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ, ಆರ್ಥಿಕ ಪರಿಸ್ಥಿತಿ ಮತ್ತು ಗುತ್ತಿಗೆದಾರರ ಬಿಲ್ ಬಾಕಿ ಕುರಿತು ಕೂಡ ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

