ಮೈಸೂರು:ಮಳವಳ್ಳಿ ಸಮೀಪ ತ್ರಿಪಲ್‌ ಬಸ್ ಅಪಘಾತ: ಇಬ್ಬರ ದುರ್ಮರಣ, 75ಕ್ಕೂ ಹೆಚ್ಚು ಜನರಿಗೆ ಗಾಯಬಾಚನಹಳ್ಳಿ ಬಳಿ ದುರಂತ; ಗಂಭೀರ ಗಾಯಾಳುಗಳು ಮೈಸೂರಿಗೆ ರವಾನೆ

Spread the love

ಮೈಸೂರ: ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಚನಹಳ್ಳಿಯ ಮಳವಳ್ಳಿ – ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿ ಭಾನುವಾರ ಸಂಜೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಮೂರು ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಡಿಕ್ಕಿಯಾಗಿದ್ದು, ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತರಾಗಿದ್ದಾರೆ. ಸುಮಾರು 75ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಟೈರ್ ಸ್ಫೋಟದಿಂದ ದುರಂತ ಆರಂಭ:
ಪೊಲೀಸರ ಮಾಹಿತಿ ಪ್ರಕಾರ, ಈ ದುರಂತವು ರಾಷ್ಟ್ರೀಯ ಹೆದ್ದಾರಿ 948ರಲ್ಲಿ ಸಂಭವಿಸಿದೆ. ಕೊಳ್ಳೇಗಾಲದಿಂದ ಬೆಂಗಳೂರು ಕಡೆಗೆ ಹೊರಟಿದ್ದ ಒಂದು ಕೆ.ಎಸ್.ಆರ್.ಟಿ.ಸಿ ಬಸ್‌ನ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ, ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಎರಡೂ ಬಸ್‌ಗಳು ಅಪಘಾತಕ್ಕೀಡಾಗಿ ರಸ್ತೆಯಲ್ಲೇ ನಿಂತಿದ್ದಾಗ, ಅದೇ ದಿಕ್ಕಿನಲ್ಲಿ ಬರುತ್ತಿದ್ದ ಮೂರನೇ ಬಸ್ ವೇಗವಾಗಿ ಬಂದು ನಿಂತಿದ್ದ ಬಸ್‌ಗಳಿಗೆ ಡಿಕ್ಕಿ ಹೊಡೆದಿದೆ.

ಸರಣಿ ಅಪಘಾತದ ತೀವ್ರತೆಗೆ ವಾಹನಗಳ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮೃತರಾದ ಇಬ್ಬರು ಮಹಿಳೆಯರ ಗುರುತು ಇನ್ನಷ್ಟೇ ಖಚಿತವಾಗಬೇಕಾಗಿದೆ.

ಸ್ಥಳಕ್ಕೆ ಅಪರ ಪೊಲೀಸ್ ಅಧೀಕ್ಷಕರ ಭೇಟಿ:
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಾಯಗೊಂಡ ಎಲ್ಲ ಪ್ರಯಾಣಿಕರನ್ನು ತಕ್ಷಣವೇ ಆಂಬ್ಯುಲೆನ್ಸ್‌ಗಳ ಮೂಲಕ ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳ ಪೈಕಿ ಸ್ಥಿತಿ ಗಂಭೀರವಾಗಿದ್ದ ಸುಮಾರು 10 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಹಾಗೂ ಮಂಡ್ಯದ ಆಸ್ಪತ್ರೆಗೆ ರವಾನಿಸಲಾಗಿದೆ.

ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ಮಾನ್ಯ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ.ಈ. ತಿಮ್ಮಯ್ಯರವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳ ಮತ್ತು ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಪಘಾತದಿಂದಾಗಿ ಮುಖ್ಯರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *