

ನವಲಗುಂದ: ಸಾಲದ ಹೊರೆ ತಾಳಲಾರದೆ ಯುವಕನೊಬ್ಬ ಗ್ರಾಮದ ಕುಡಿಯುವ ನೀರಿನ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಾಲ್ಲೂಕಿನ ಹಾಲಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಹಾಲಕುಸುಗಲ್ ಗ್ರಾಮದ ಮೌಲಾಸಾಬ್ ಮಕ್ತುಮಸಾಬ ಹೆಬಸೂರ (38) ಸಾವಿಗೆ ಶರಣಾದ ದುರ್ದೈವಿ.
ಘಟನೆ ಹಿನ್ನೆಲೆ: ಮೃತ ಮೌಲಾಸಾಬ್ ಅವರು ಸುಮಾರು ನಾಲ್ಕು ತಿಂಗಳ ಹಿಂದೆ ಬಾಡಿಗೆಗೆ ಓಡಿಸಲು ಹುಬ್ಬಳ್ಳಿಯ ಐ.ಡಿ.ಎಫ್.ಸಿ. ಫಸ್ಟ್ ಬ್ಯಾಂಕ್ನಿಂದ ₹4,79,000 ಸಾಲ ಪಡೆದು, ಟಾಟಾ ಏಸ್ ಗೂಡ್ಸ್ ವಾಹನ (ಸಂಖ್ಯೆ: ಕೆ.ಎ.63.ಎ.5451) ಖರೀದಿಸಿದ್ದರು. ಆದರೆ, ವಾಹನಕ್ಕೆ ಸರಿಯಾದ ಬಾಡಿಗೆ ಸಿಗುತ್ತಿರಲಿಲ್ಲ. ಇದರ ಜೊತೆಗೆ, ಮನೆಯ ನಿರ್ವಹಣೆಗಾಗಿ ಪತ್ನಿಯ ಹೆಸರಿನಲ್ಲಿ ನರಗುಂದದ ಪ್ರಗತಿ ಸಂಘದಲ್ಲಿ ₹50 ಸಾವಿರ ಸಾಲ ಮಾಡಿದ್ದರು. ಅಲ್ಲದೇ, ವಾಹನದ ಎರಡು ಕಂತುಗಳನ್ನು ತೀರಿಸಲು ಗ್ರಾಮದಲ್ಲಿ ಕೈಗಡ ಸಾಲ ಮಾಡಿದ್ದರು ಎನ್ನಲಾಗಿದೆ.
ಸರಿಯಾದ ಬಾಡಿಗೆ ಸಿಗದಿರುವುದು ಮತ್ತು ಸಾಲಗಳನ್ನು ತೀರಿಸಲು ಸಾಧ್ಯವಾಗದಿರುವ ಕಾರಣ ಮೌಲಾಸಾಬ್ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು. ಸೋಮವಾರ ಮಧ್ಯಾಹ್ನದ ಸಮಯದಲ್ಲಿ ತಾನಾಗಿಯೇ ಗ್ರಾಮದ ಕುಡಿಯುವ ನೀರಿನ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಮಮತಾಜ ಹೆಬಸೂರ ಅವರು ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಗ್ರಾಮಸ್ಥರ ಸಹಕಾರದೊಂದಿಗೆ ಮೃತ ದೇಹವನ್ನು ಪತ್ತೆ ಮಾಡಿ ಹೊರತೆಗೆದು ವಾರಸುದಾರರಿಗೆ ಒಪ್ಪಿಸಿದರು. ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

