
ಧಾರವಾಡ: ಕೃಷಿಯಲ್ಲಿ ಸಾಂಪ್ರದಾಯಿಕ ತಳಿಗಳ ಸಂರಕ್ಷಣೆ ಮಾಡಿದರೆ ಅದು ನಮ್ಮ ಸಂಸ್ಕೃತಿಯನ್ನು ರಕ್ಷಿಸಿದಂತೆ. ಅಂತಹ ತಳಿಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ, ಪರಿಚಯಿಸುವ ಅಗತ್ಯವಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ ಹೇಳಿದರು.
ಸಾಂಪ್ರದಾಯಿಕ ತಳಿಗಳ ಅಗತ್ಯತೆ
ಕರ್ನಾಟಕ ವಿದ್ಯಾವರ್ಧಕ ಸಂಘವು, ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೃಷಿಯಲ್ಲಿ ಸಾಂಪ್ರದಾಯಿಕ ತಳಿಗಳ ಇಂದಿನ ಅಗತ್ಯತೆ’ ವಿಷಯ ಕುರಿತು ಅವರು ಮಾತನಾಡುತ್ತಿದ್ದರು. ಭಾರತವು ಇಂದು ‘ಹಸಿರು ಕ್ರಾಂತಿ’ಯ ಪರಿಣಾಮದಿಂದ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದರೆ, ನಾವು ಸೇವಿಸುತ್ತಿರುವ ಆಹಾರ ಧಾನ್ಯಗಳಲ್ಲಿ ಪೋಷಕಾಂಶಗಳ ಕೊರತೆ ಕಂಡು ಬಂದಿದ್ದರಿಂದ ಮನುಷ್ಯ ಅನೇಕ ರೋಗರುಜಿನಗಳಿಗೆ ಬಲಿಯಾಗುತ್ತಿದ್ದಾನೆ. ಒಂದು ರೀತಿ ಅವನು ಉತ್ಸಾಹವಿಲ್ಲದ ಜೀವನ ವಿಧಾನ ಹೊಂದಿದ್ದಾನೆ. ಇದಕ್ಕೆ ಕಾರಣ ಸಾಂಪ್ರದಾಯಿಕ ತಳಿಗಳನ್ನು ಬೆಳೆಯದೇ ಇರುವುದು. ಸಾಂಪ್ರದಾಯಿಕ ತಳಿಗಳಲ್ಲಿ ಮನುಷ್ಯನ ಆರೋಗ್ಯ ವರ್ಧನೆಗೆ ಬೇಕಾಗುವ ಶಕ್ತಿ ಇರುವುದನ್ನು ಕಾಣಬಹುದು ಎಂದು ಡಾ. ಬಿರಾದಾರ ವಿವರಿಸಿದರು.

ಕೃಷಿ ವಿಜ್ಞಾನಿ ಹೊಸಮನಿ ಸ್ಮರಣೆ
ದಿವಂಗತ ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ ಈ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಯಾಗಿದ್ದರು. ಅವರು ಬಿಜಾಪುರದ ಒಣ ಬೇಸಾಯ ಸಂಶೋಧನಾ ಕೇಂದ್ರದಲ್ಲಿ ಬೇಸಾಯ ಶಾಸ್ತ್ರಜ್ಞರಾಗಿ, ಮಳೆ ಕಡಿಮೆ ಬೀಳುವಲ್ಲಿ ಲಭ್ಯವಿರುವ ಅತ್ಯಲ್ಪ ನೀರನ್ನು ಸಂಗ್ರಹಿಸಲು ಕೃಷಿ ಹೊಂಡಗಳ ನಿರ್ಮಾಣದ ಕಲ್ಪನೆ ನೀಡಿದರು. ಒಣ ಬೇಸಾಯ ಪದ್ಧತಿ ಹೇಗೆ ಲಾಭದಾಯಕ ಎಂಬುದನ್ನು ಮಾರ್ಗದರ್ಶನ ಮಾಡಿದವರು. ಸರ್ಕಾರವೂ ಸಹ ಅವರ ಕೃಷಿ ಹೊಂಡದ ಕಲ್ಪನೆಯಿಂದ ಪ್ರಭಾವಿತವಾಗಿ ‘ಕೃಷಿ ಭಾಗ್ಯ’ ಎಂಬ ಯೋಜನೆ ಜಾರಿಗೆ ತಂದದ್ದನ್ನು ಸ್ಮರಿಸಬಹುದೆಂದು ಡಾ. ಬಿರಾದಾರ ತಿಳಿಸಿದರು.
ದತ್ತಿಯ ಉದ್ದೇಶ ಮತ್ತು ಅಧ್ಯಕ್ಷತೆ
ದತ್ತಿದಾನಿಗಳಾದ ಪ್ರಗತಿಪರ ರೈತ ಈಶ್ವರಚಂದ್ರ ಹೊಸಮನಿ ಮಾತನಾಡಿ, ಕ.ವಿ.ವ. ಸಂಘವು ಸಾಹಿತ್ಯದ ಜೊತೆಗೆ ಕೃಷಿಯ ಬಗ್ಗೆಯೂ ಚಿಂತನ-ಮಂಥನ ಮಾಡಬೇಕೆಂಬ ಉದ್ದೇಶದಿಂದ ತಮ್ಮ ತಂದೆ ಪ್ರೊ. ಶಿವರಾಜ ಅ. ಹೊಸಮನಿ ಹೆಸರಿನಿಂದ ದತ್ತಿ ಇಡಲಾಗಿದೆ. ರೈತರಿಗೆ ಕೃಷಿ ಲಾಭದಾಯಕ ಎನ್ನುವುದನ್ನು ಮನವರಿಕೆ ಮಾಡುವ ಉದ್ದೇಶ ಇದಾಗಿದೆ ಎಂದರು. ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು
ಶಂಕರ ಕುಂಬಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು. ಡಾ. ಸಂಜೀವ ಕುಲಕರ್ಣಿ, ಪ್ರೊ. ಐ.ಜಿ. ಸನದಿ, ಪಿ.ಎಚ್. ನೀರಲಕೇರಿ, ಸಿದ್ಧಣ್ಣ ಕಂಬಾರ, ಕಲ್ಲಪ್ಪ ಯಲಿವಾಳ, ಎಂ.ಎಫ್. ಹಿರೇಮಠ, ಅಮೃತ ಬೊಳ್ಳೊಳ್ಳಿ, ಶ್ರೀಶೈಲಗೌಡ ಕಮತರ, ಕೃಷಿ ವಿ.ವಿ. ಪ್ರಾಧ್ಯಾಪಕರು, ಹೊಸಮನಿ ಪರಿವಾರದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

