
ತುಮಕೂರು/ಕುಣಿಗಲ್: ಜಿಲ್ಲೆಯ ಕುಣಿಗಲ್ ತಾಲ್ಲೂಕು ಯಡಿಯೂರು ಸಮೀಪದ ಮಾರ್ಕೋನಹಳ್ಳಿ ಅಣೆಕಟ್ಟು (ಡ್ಯಾಂ) ನಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ಆರು ಜನ ನೀರು ಪಾಲಾಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ. ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಡ್ಯಾಂನಲ್ಲಿ ಒಟ್ಟು ಎಂಟು ಜನ ಈಜಲು ಹೋಗಿದ್ದಾಗ ದುರಂತ ಸಂಭವಿಸಿದೆ.
ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಎಂದು ತಿಳಿದುಬಂದಿದೆ. ತಬಾಸುಮ್ (45), ಶಬಾನ (44), ಮಿಫ್ರಾ (4), ಮಹಿಬ್ (1), ಸಾಜಿಯಾ ಮತ್ತು ಅರ್ಬಿನ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಈ ಎಲ್ಲರೂ ತುಮಕೂರು ನಗರದ ಬಿಜಿ ಪಾಳ್ಯದವರು ಎಂದು ಮಾಹಿತಿ ಲಭ್ಯವಾಗಿದೆ.
ಸ್ಥಳೀಯರ ಸಹಾಯದಿಂದ ಸಾಜಿಯಾ ಮತ್ತು ಅರ್ಬಿನ್ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಉಳಿದವರ ಮೃತದೇಹಗಳಿಗಾಗಿ ಪೊಲೀಸರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ಹುಲಿಯೂರು ದುರ್ಗ ಪೊಲೀಸರು ಹಾಗೂ ಅಮೃತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

