
ಧಾರವಾಡ (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅವರು ರೈತರಿಗೆ ಬೀಜಗಳನ್ನು ವಿತರಿಸಿ, ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
27 ಕೇಂದ್ರಗಳಲ್ಲಿ ಬೀಜ ವಿತರಣೆ:
ಸಚಿವರಾದ ಸಂತೋಷ ಲಾಡ್ ಅವರು ಮಾತನಾಡಿ, “2025-26ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ವಿತರಿಸಲು ಒಟ್ಟು 14 ರೈತ ಸಂಪರ್ಕ ಕೇಂದ್ರಗಳು ಹಾಗೂ 13 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 27 ಬೀಜ ವಿತರಣಾ ಕೇಂದ್ರಗಳನ್ನು ಗುರುತಿಸಲಾಗಿದೆ” ಎಂದು ತಿಳಿಸಿದರು. ಕೃಷಿ ಇಲಾಖೆಯು ಹಿಂಗಾರು ಹಂಗಾಮಿಗೆ ಅಗತ್ಯವಾದ ಕಡಲೆ, ಗೋಧಿ, ಜೋಳ, ಮೆಕ್ಕೆಜೋಳ, ಶೇಂಗಾ ಹಾಗೂ ವಿವಿಧ ಬೆಳೆಗಳ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡುತ್ತಿದೆ.
29,906 ಕ್ವಿಂಟಲ್ ಬೀಜ ವಿತರಣೆ ಗುರಿ:
ಹಿಂಗಾರು ಹಂಗಾಮಿಗೆ ಅಗತ್ಯವಾದ ಬೀಜ ವಿತರಣೆಗೆ ಕೃಷಿ ಇಲಾಖೆ ಗುರಿ ನಿಗದಿಪಡಿಸಿದೆ. ಸಹಾಯಧನದಡಿ ಒಟ್ಟು 29,906 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲು ಗುರಿ ಹೊಂದಲಾಗಿದೆ. ಇದರಲ್ಲಿ ಪ್ರಮುಖವಾಗಿ ಕಡಲೆ 28,799 ಕ್ವಿಂಟಲ್, ಗೋಧಿ 385 ಕ್ವಿಂಟಲ್, ಜೋಳ 300 ಕ್ವಿಂಟಲ್, ನೆಲಗಡಲೆ 276 ಕ್ವಿಂಟಲ್ ಹಾಗೂ ಇತರೆ ಬೀಜಗಳು ಸೇರಿವೆ. ಈಗಾಗಲೇ ವಿವಿಧ ಬೀಜ ಉತ್ಪಾದನಾ ಸಂಸ್ಥೆಗಳ ಬೀಜಗಳನ್ನು ಎಲ್ಲ ವಿತರಣಾ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜಿಲ್ಲೆಯ ಬೀಜ ವಿತರಣಾ ಕೇಂದ್ರಗಳ ವಿವರ:
ಧಾರವಾಡ ತಾಲೂಕಿನಲ್ಲಿ: ಅಳ್ಳಾವರ, ಧಾರವಾಡ, ಅಮ್ಮಿನಭಾವಿ ರೈತ ಸಂಪರ್ಕ ಕೇಂದ್ರಗಳು. ಹೆಚ್ಚುವರಿ ಕೇಂದ್ರಗಳು: ನರೇಂದ್ರ, ಹೆಬ್ಬಳ್ಳಿ, ಉ.ಬೆಟಗೇರಿ.
ಕಲಘಟಗಿ ತಾಲೂಕಿನಲ್ಲಿ: ಕಲಘಟಗಿ, ತ.ಹೊನ್ನಳ್ಳಿ, ದುಮ್ಮವಾಡ.
ಹುಬ್ಬಳ್ಳಿ ತಾಲೂಕಿನಲ್ಲಿ: ಚಬ್ಬಿ, ಶಿರಗುಪ್ಪಿ, ಹುಬ್ಬಳ್ಳಿ ರೈತ ಸಂಪರ್ಕ ಕೇಂದ್ರಗಳು. ಹೆಚ್ಚುವರಿ ಕೇಂದ್ರಗಳು: ನೂಲ್ವಿ, ಕುಸುಗಲ್ಲ, ಕೋಳಿವಾಡ, ಬಿಡನಾಳ.
ಕುಂದಗೋಳ ತಾಲೂಕಿನಲ್ಲಿ: ಕುಂದಗೋಳ, ಸಂಶಿ ರೈತ ಸಂಪರ್ಕ ಕೇಂದ್ರಗಳು. ಹೆಚ್ಚುವರಿ ಕೇಂದ್ರಗಳು: ಯಲಿವಾಳ, ಶಿರೂರು.
ನವಲಗುಂದ ತಾಲೂಕಿನಲ್ಲಿ: ಅಣ್ಣಿಗೇರಿ, ಮೊರಬ್ಬ, ಯರಗುಪ್ಪಿ ರೈತ ಸಂಪರ್ಕ ಕೇಂದ್ರಗಳು. ಹೆಚ್ಚುವರಿ ಕೇಂದ್ರಗಳು: ಶಲವಡಿ, ನವಲಗುಂದ.
ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಓ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕೃಷಿ ಇಲಾಖೆ ಜಂಟಿ ನಿದೇರ್ಶಕ ಮಂಜುನಾಥ ಅಂತರವಳ್ಳಿ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.

