ಹುಬ್ಬಳ್ಳಿ ಕಿಮ್ಸನಲ್ಲಿ ಅಪರೂಪದ ವೈದ್ಯಕೀಯ ಪ್ರಕರಣ: ನವಜಾತ ಗಂಡು ಮಗುವಿನೊಳಗೆ ‘ಭ್ರೂಣ ಪತ್ತೆ’

Spread the love

ಹುಬ್ಬಳ್ಳಿ: ಅಪರೂಪದಲ್ಲಿ ಅಪರೂಪದ ವೈದ್ಯಕೀಯ ಪ್ರಕರಣವೊಂದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (KMCRI) ನಡೆದಿದೆ. ಇಲ್ಲಿ ಇತ್ತೀಚೆಗೆ ಜನಿಸಿದ ನವಜಾತ ಗಂಡು ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಅಪೂರ್ಣ ಭ್ರೂಣ (Fetus in Fetu) ಇರುವುದು ಪತ್ತೆಯಾಗಿದೆ. ವೈದ್ಯಕೀಯ ಲೋಕದಲ್ಲಿ ಅಚ್ಚರಿ ಮೂಡಿಸಿರುವ ಈ ಘಟನೆ ಕುರಿತು ಶಸ್ತ್ರಚಿಕಿತ್ಸೆ ಮೂಲಕ ಭ್ರೂಣವನ್ನು ಹೊರತೆಗೆಯಲು ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ.

​ಜಿಲ್ಲೆಯ ಕುಂದಗೋಳ ಮೂಲದ ಗರ್ಭಿಣಿಯೊಬ್ಬರು ಸೆಪ್ಟೆಂಬರ್ 23 ರಂದು ಹುಬ್ಬಳ್ಳಿ ಕೆಎಂಸಿಆರ್‌ಐನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಆರೋಗ್ಯವಾಗಿದ್ದರೂ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹಾಗೂ ಶಸ್ತ್ರಚಿಕಿತ್ಸಕರು ಮಗುವಿನ ದೇಹದೊಳಗೆ ಭ್ರೂಣವಿರುವುದನ್ನು ಆರಂಭಿಕ ತಪಾಸಣೆಯಲ್ಲಿಯೇ ಪತ್ತೆ ಹಚ್ಚಿದ್ದಾರೆ.

​ನಂತರ ನಡೆಸಿದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಹೊಟ್ಟೆಯ ಭಾಗದಲ್ಲಿ ಬೆನ್ನುಹುರಿ ಇರುವ ಒಂದು ಅರೆಬೆಂದ ಭ್ರೂಣವಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ಖಚಿತತೆಗಾಗಿ ಎಂಆರ್‌ಐ ಸ್ಕ್ಯಾನ್ ಮಾಡಿದಾಗ ‘ಫೆಟಸ್‌ ಇನ್‌ ಫೆಟು’ (ಒಂದು ಮಗುವಿನೊಳಗೆ ಮತ್ತೊಂದು ಮಗು) ಎಂಬ ಅತಿ ಅಪರೂಪದ ವೈದ್ಯಕೀಯ ಸ್ಥಿತಿಯನ್ನು ವೈದ್ಯರು ಖಚಿತಪಡಿಸಿಕೊಂಡಿದ್ದಾರೆ. ಈ ಸ್ಥಿತಿಯು ಪ್ರತಿ ಐದು ಲಕ್ಷ ಜನನಗಳಲ್ಲಿ ಒಂದರಲ್ಲಿ ಮಾತ್ರ ಸಂಭವಿಸುವ ಸಾಧ್ಯತೆಯಿದೆ.

​ಸದ್ಯ ಮಗು ವೈದ್ಯರ ತೀವ್ರ ನಿಗಾದಲ್ಲಿ ಇದೆ. ನವಜಾತ ಶಿಶುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಶೀಘ್ರದಲ್ಲಿಯೇ ಈ ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಲು ವೈದ್ಯಕೀಯ ತಂಡ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಪ್ರಕರಣವು ರಾಜ್ಯದಲ್ಲಿ ಮಾತ್ರವಲ್ಲದೆ, ದೇಶದಲ್ಲಿಯೇ ಅಪರೂಪದ ಪ್ರಕರಣವಾಗಿ ಗಮನ ಸೆಳೆದಿದೆ.

Leave a Reply

Your email address will not be published. Required fields are marked *