
‘ಗೋಲ್ಡನ್ ಟಿಕೆಟ್’ ಪ್ರವಾಸಿಗರಿಗೆ ನಿರಾಕರಣೆ, ಸಚಿವರ ಕುಟುಂಬ ಸದಸ್ಯರಿಗೆ ವಿಶೇಷ ಆತಿಥ್ಯ: ಬಿಜೆಪಿ ಆಕ್ರೋಶ
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸರ್ಕಾರಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರೊಬ್ಬರ ಮೊಮ್ಮಗನಿಗೆ ಪ್ರೊಟೊಕಾಲ್ ಮೀರಿ ವಿಶೇಷ ಸ್ಥಾನ ನೀಡಲಾಗಿದೆ ಎಂಬ ವಿವಾದ ಈಗ ದೊಡ್ಡ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಉಸ್ತುವಾರಿ ಸಚಿವ ಡಾ. ಸಿ. ಮಹಾದೇವಪ್ಪ ಅವರ ಮೊಮ್ಮಗ ಮುಖ್ಯಮಂತ್ರಿಗಳ ತೆರೆದ ಜೀಪಿನಲ್ಲಿ ಪೆರೇಡ್ನಲ್ಲಿ ಭಾಗಿಯಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ವರದಿ ಕೇಳಿದೆ ಎನ್ನಲಾಗಿದೆ.
ಬಿಜೆಪಿಯಿಂದ ಖಂಡನೆ: ‘ಇದು ಯಾವ ಪ್ರೊಟೊಕಾಲ್?’
ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಬಿಜೆಪಿ ಕರ್ನಾಟಕ ಘಟಕವು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ದಸರಾ ಮಹೋತ್ಸವದ ಸಂದರ್ಭದಲ್ಲಿ 77 ಸಾವಿರ ರೂಪಾಯಿಗಳ ಗೋಲ್ಡನ್ ಟಿಕೆಟ್ ಪಡೆದ ಪ್ರವಾಸಿಗರಿಗೇ ಒಳಗೆ ಪ್ರವೇಶ ನೀಡದೆ ಗೇಟ್ನಲ್ಲೇ ನಿಲ್ಲಿಸಿದ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಮಹಾದೇವಪ್ಪ ಅವರ ಮೊಮ್ಮಗನಿಗೆ ಯಾವ ಪ್ರೋಟೋಕಾಲ್ ನೀಡಲಾಗಿತ್ತು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೆರೆದ ಜೀಪ್ನ ಪೆರೇಡ್ನಲ್ಲಿ ಮೊಮ್ಮಗನನ್ನು ಬಿಟ್ಟಿದ್ದೇಕೆ?” ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಹಿಂದೆ, ವಿಧಾನಸೌಧದಲ್ಲಿ ನಡೆದ ಆರ್ಸಿಬಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮೊಮ್ಮಗ, ಜಮೀರ್ ಅಹಮದ್ ಖಾನ್ ಪುತ್ರ ಸೇರಿದಂತೆ ತಮ್ಮ ಕುಟುಂಬದವರ ಫೋಟೋಶೂಟ್ ಹುಚ್ಚಿಗೆ 11 ಜನ ಅಮಾಯಕರನ್ನು ಬಲಿ ಪಡೆದ ಮೇಲೂ ಸರ್ಕಾರ ಬುದ್ಧಿ ಕಲಿತಿಲ್ಲ. ಕಾಂಗ್ರೆಸ್ ಸರ್ಕಾರ ಬುದ್ದಿ ಕಳೆದುಕೊಂಡು ನಿಂತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಹೈಕಮಾಂಡ್ ವರದಿ ಕೇಳಿದ್ದೇಕೆ?
ಪ್ರೊಟೊಕಾಲ್ ಉಲ್ಲಂಘನೆ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಚಿವರ ಕುಟುಂಬ ಸದಸ್ಯರ ಅತಿಯಾದ ಪಾಲ್ಗೊಳ್ಳುವಿಕೆ ಕುರಿತು ರಾಜ್ಯದಲ್ಲಿ ಆಗಾಗ ವಿವಾದಗಳು ಏಳುತ್ತಿರುವುದು ಕಾಂಗ್ರೆಸ್ ಹೈಕಮಾಂಡ್ಗೆ ಮುಜುಗರ ತಂದಿದೆ. ದಸರಾ ಉತ್ಸವದಂತಹ ಪ್ರತಿಷ್ಠಿತ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಮೊಮ್ಮಗನ ಪಾಲ್ಗೊಳ್ಳುವಿಕೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ, ಹೈಕಮಾಂಡ್ ರಾಜ್ಯ ನಾಯಕತ್ವದಿಂದ ಈ ಬಗ್ಗೆ ಸಂಪೂರ್ಣ ವರದಿ ಕೇಳಿದೆ ಎನ್ನಲಾಗಿದೆ.
ಸರ್ಕಾರದ ಮಹತ್ವದ ಕಾರ್ಯಕ್ರಮಗಳಲ್ಲಿ ವಿಐಪಿಗಳ ಕುಟುಂಬ ಸದಸ್ಯರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ನಿಯಮಗಳು ಮತ್ತು ಪ್ರೊಟೊಕಾಲ್ ಕುರಿತು ಹೈಕಮಾಂಡ್ ಸ್ಪಷ್ಟೀಕರಣ ಕೇಳಿದೆ. ಈ ಮೂಲಕ ವಿವಾದಗಳಿಗೆ ಕಡಿವಾಣ ಹಾಕಲು ಹೈಕಮಾಂಡ್ ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

