ಮೈಸೂರು ದಸರಾ ಕ್ರೀಡಾಕೂಟ: ಪದಕ ಬೇಟೆ, ಗೆದ್ದ ಧಾರವಾಡ ತಂಡಕ್ಕೆ ಜಿಲ್ಲಾಧಿಕಾರಿ ಅಭಿನಂದನೆ

Spread the love

ಧಾರವಾಡ: ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ನಡೆದ ಪ್ರತಿಷ್ಠಿತ ರಾಜ್ಯಮಟ್ಟದ ಸಿ.ಎಂ ಕಪ್ ದಸರಾ ಕ್ರೀಡಾಕೂಟದಲ್ಲಿ ಧಾರವಾಡ ಜಿಲ್ಲೆಯ ಕ್ರೀಡಾಪಟುಗಳು ಅಕ್ಷರಶಃ ಪದಕಗಳ ಬೇಟೆಯಾಡಿದ್ದಾರೆ. ವಿವಿಧ ವಿಭಾಗಗಳಲ್ಲಿ ಒಟ್ಟು 111 ಪದಕಗಳನ್ನು ಮುಡಿಗೇರಿಸಿಕೊಂಡ ಧಾರವಾಡ ತಂಡಕ್ಕೆ, ಜಿಲ್ಲಾಡಳಿತದಿಂದ ಮಂಗಳವಾರದಂದು ಆತ್ಮೀಯ ಅಭಿನಂದನೆ ಸಲ್ಲಿಸಲಾಯಿತು.

ಅಟ್ಲೆಟಿಕ್ಸ್, ಹಾಕಿ, ವ್ಹಾಲಿಬಾಲ್, ಜಿಮ್ನಾಸ್ಟಿಕ್, ಟೇಕ್ವಾಂಡೋ ಮತ್ತು ಕುಸ್ತಿ ಸೇರಿದಂತೆ ಹಲವು ವಿಭಾಗಗಳಲ್ಲಿ ಧಾರವಾಡದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಒಟ್ಟು 111 ಪದಕಗಳ ಜೊತೆಗೆ, ಮೂರು ವಿಭಾಗಗಳ ಗುಂಪು ಸ್ಪರ್ಧೆಯಲ್ಲಿ (ಟ್ರೋಫಿ) ಪ್ರಶಸ್ತಿಗಳನ್ನೂ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಸಾಧನೆಗಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ವಿಜೇತ ಕ್ರೀಡಾಪಟುಗಳನ್ನು ಗೌರವಿಸಿ, ಮುಂದಿನ ಕ್ರೀಡಾ ಜೀವನಕ್ಕೆ ಶುಭ ಕೋರಿದರು.

ಜಿಲ್ಲಾಧಿಕಾರಿಗಳಿಂದ ಪ್ರೋತ್ಸಾಹ: ಕ್ರೀಡಾಪಟುಗಳನ್ನು ಅಭಿನಂದಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಸಂತಸ ತಂದಿದೆ. ಕ್ರೀಡಾಪಟುಗಳು ಇನ್ನಷ್ಟು ಕಠಿಣ ಪರಿಶ್ರಮದಿಂದ ತರಬೇತಿ ಪಡೆದು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲು ಸಿದ್ಧರಾಗಬೇಕು ಎಂದು ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಹೆಚ್. ಅಮಾರಪುರ, ಕಚೇರಿ ಅಧೀಕ್ಷಕ ಸುರೇಂದ್ರ ಗಂ. ಭಾವಿಕಟ್ಟಿ, ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಶ್ರೀರಾಮ ಬುಡಕಿ, ಜಿಮ್ನಾಸ್ಟಿಕ್ ತರಬೇತುದಾರರ ಬಸವರಾಜ ಪಟಾತ್ ಮತ್ತು ಇಲಾಖೆಯ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *