ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ; ಪ್ರವಾಹ, ಸ್ಮಾರ್ಟ್ ಮೀಟರ್ ಹಗರಣ ಚರ್ಚೆಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟಕ್ಕೆ ತೀರ್ಮಾನ; ಗುಂಡಿ ಮುಚ್ಚುವ ಅಭಿಯಾನಕ್ಕೆ ಕರೆ

Spread the love

ಬೆಂಗಳೂರು:
ರಾಜ್ಯದಲ್ಲಿ ತಲೆದೋರಿರುವ ಅತಿವೃಷ್ಟಿ, ನೆರೆಹಾನಿ, ಸ್ಮಾರ್ಟ್ ಮೀಟರ್ ಹಗರಣ, ಹಾಗೂ ಅವೈಜ್ಞಾನಿಕ ಜಾತಿ ಗಣತಿ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಇಂದು (ಸೆ. 27) ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು.

ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ತೀವ್ರ ಹೋರಾಟ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ರೈತರು, ದಲಿತರು ಮತ್ತು ಶೋಷಿತ ವರ್ಗವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಪ್ರವಾಹ ಹಾನಿ ನಿರ್ವಹಣೆ ವೈಫಲ್ಯ
ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು, ಅತಿವೃಷ್ಟಿ ಮತ್ತು ನೆರೆಹಾನಿಯಿಂದ ತೊಂದರೆಗೊಳಗಾದ 16ಕ್ಕೂ ಹೆಚ್ಚು ಜಿಲ್ಲೆಗಳ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿಲ್ಲ ಎಂದು ಆರೋಪಿಸಿದರು.

“ಹಿಂದಿನ ಬಿಜೆಪಿ ಸರ್ಕಾರವು ಎನ್‍ಡಿಆರ್‍ಎಫ್ ಮಾನದಂಡಗಳ ಹೊರತಾಗಿಯೂ ರಾಜ್ಯ ಬಜೆಟ್‌ನಿಂದ ಹಣ ನೀಡಿ ರೈತರ ನೆರವಿಗೆ ಧಾವಿಸಿತ್ತು. ಆದರೆ, ಈಗಿನ ಸರ್ಕಾರವು ತನ್ನ ಬಜೆಟ್‌ನಿಂದ ಒಂದು ಪುಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಇದರ ವಿರುದ್ಧ ಹೋರಾಟ ನಡೆಸಲು ಕೋರ್ ಕಮಿಟಿ ಸದಸ್ಯರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ರಾಜ್ಯ ಸರ್ಕಾರವನ್ನು ಎಚ್ಚರಿಸಲು ತೀರ್ಮಾನಿಸಲಾಗಿದೆ,” ಎಂದು ಪಿ. ರಾಜೀವ್ ತಿಳಿಸಿದರು.

ಸ್ಮಾರ್ಟ್ ಮೀಟರ್ ಹಗರಣದ ಬಗ್ಗೆ ಚರ್ಚೆ
ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರಸ್ತಾಪಿಸಿದ ಸ್ಮಾರ್ಟ್ ಮೀಟರ್ ಹಗರಣದ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಇದು ಒಂದು ಸಾವಿರ ಕೋಟಿಗೂ ಮೀರಿದ ಹಗರಣವಾಗಿದ್ದು, ಇದರ ವಿರುದ್ಧ ಗಟ್ಟಿ ಹೋರಾಟ ನಡೆಸುವ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ರಾಜೀವ್ ವಿವರಿಸಿದರು. ಇದೇ ವೇಳೆ, ಧಾರವಾಡದಲ್ಲಿನ ವಿದ್ಯಾರ್ಥಿಗಳ ಹೋರಾಟದ ಕುರಿತು ಚರ್ಚಿಸಿ, ಯುವಕರ ಪರವಾಗಿ ಪಕ್ಷ ಗಟ್ಟಿಯಾಗಿ ನಿಲ್ಲುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಗುಂಡಿ ಮುಚ್ಚುವ ಅಭಿಯಾನ
ರಾಜ್ಯದ ರಸ್ತೆಗಳಲ್ಲಿನ ಗುಂಡಿಗಳ ಕುರಿತಂತೆ ಸರ್ಕಾರವನ್ನು ಎಚ್ಚರಿಸಲು, ಗುಂಡಿ ಮುಚ್ಚುವ ಹೋರಾಟವನ್ನು ಅಭಿಯಾನದ ರೀತಿಯಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ. “ಈ ಹೋರಾಟದಲ್ಲಿ ಪಾಲ್ಗೊಳ್ಳದ ಎಲ್ಲ ಜನಪ್ರತಿನಿಧಿಗಳು ನಾಳೆಯಿಂದಲೇ ಈ ರಾಜ್ಯ ಸರ್ಕಾರಕ್ಕೆ ಅಪಮಾನ ಆಗುವ ರೀತಿಯಲ್ಲಿ ಗುಂಡಿ ತುಂಬುವ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ,” ಎಂದು ಪಿ. ರಾಜೀವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಾತಿ ಗಣತಿ ವಿರೋಧವಲ್ಲ, ಆತಂಕ
ಜಾತಿ ಜನಗಣತಿಯನ್ನು ಪೂರ್ವ ತಯಾರಿ ಇಲ್ಲದೇ ಮತ್ತು ಸಂಪೂರ್ಣ ಸಿದ್ಧತೆ ಇಲ್ಲದೇ ಮಾಡುತ್ತಿರುವ ಬಗ್ಗೆ ಬಿಜೆಪಿ ಆತಂಕ ವ್ಯಕ್ತಪಡಿಸಿದೆ. ಜನಗಣತಿಯನ್ನು ವಿರೋಧಿಸುವುದಿಲ್ಲ, ಆದರೆ ಪೂರ್ವ ತಯಾರಿ ಇರಬೇಕಿತ್ತು ಎಂದ ಪಕ್ಷದ ನಿಲುವು ರಾಜೀವ್ ಅವರ ಮಾತಿನಲ್ಲಿ ಸ್ಪಷ್ಟವಾಯಿತು.

“ಸಂವಿಧಾನಾತ್ಮಕವಾಗಿ ಜಾತಿ ಗಣತಿ ಮಾಡಲು ರಾಜ್ಯಕ್ಕೆ ಅಧಿಕಾರವಿಲ್ಲ, ಕೇಂದ್ರಕ್ಕಿದೆ. ರಾಜ್ಯ ಸರ್ಕಾರವು ಅಫಿಡವಿಟ್ ಮೂಲಕ ನಾವು ಜಾತಿ ಗಣತಿ ಮಾಡುತ್ತಿಲ್ಲ; ಸಾಮಾಜಿಕ, ಶೈಕ್ಷಣಿಕ ಗಣತಿಯನ್ನು ಮಾತ್ರ ಮಾಡುತ್ತಿರುವುದಾಗಿ ಹೇಳಿದೆ” ಎಂದು ಅವರು ವಿವರಿಸಿದರು.

ಪ್ರಮುಖ ನಾಯಕರ ಭಾಗಿ
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗ್ರವಾಲ್, ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ ಡಾ. ಸಿ.ಎನ್. ಅಶ್ವತ್ಥನಾರಾಯಣ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಎಲ್ಲ ಪ್ರಮುಖ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *