
ಧಾರವಾಡ: ಸಾರ್ವಜನಿಕ ಅಭಿವೃದ್ಧಿ ಹಿತಾಸಕ್ತಿಯಿಂದ ರಾಜ್ಯ ಸರ್ಕಾರ ಕೈಗೊಂಡಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಕಾರ್ಯಕ್ಕೆ ನಿಯೋಜಿತರಾಗಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ನಿರ್ಲಕ್ಷ್ಯ, ನೆಪ ಅಥವಾ ಉದಾಸೀನತೆ ತೋರುವವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಜಿಲ್ಲಾಧಿಕಾರಿ (ಡಿಸಿ) ಮತ್ತು ಸಮೀಕ್ಷೆಯ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷೆ ದಿವ್ಯ ಪ್ರಭು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು (ಸೆ. 26) ಮಧ್ಯಾಹ್ನ ಸಮೀಕ್ಷೆಯ ಮೇಲ್ವಿಚಾರಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಪ್ರಗತಿ ಪರಿಶೀಲನೆ ಮಾಡಿದರು.
ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ, ಅ. 7ರ ಡೆಡ್‌ಲೈನ್ ಕಡ್ಡಾಯ
ಜಿಲ್ಲೆಯಲ್ಲಿ ಸೆಪ್ಟೆಂಬರ್ 22ರಿಂದ ಸಮೀಕ್ಷೆ ಆರಂಭವಾಗಿದ್ದು, ಆರಂಭಿಕ ತಾಂತ್ರಿಕ ಸಮಸ್ಯೆಗಳು ಬಗೆಹರಿದಿವೆ. ಹೊಸದಾಗಿ ಬಿಡುಗಡೆ ಮಾಡಿರುವ 3.5 ಆ್ಯಪ್ ಅನ್ನು ಸಮೀಕ್ಷೆದಾರರು ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದಾಗ್ಯೂ, ನಿಗದಿತ ಗುರಿಗಿಂತ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಾಣುತ್ತಿಲ್ಲ ಎಂದು ಡಿಸಿ ಅಸಮಾಧಾನ ವ್ಯಕ್ತಪಡಿಸಿದರು.
“ಮುಖ್ಯಮಂತ್ರಿಗಳು ಇಂದು ಬೆಳಿಗ್ಗೆ ವೀಡಿಯೋ ಸಂವಾದದ ಮೂಲಕ ಸಮೀಕ್ಷೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು, ಸಮೀಕ್ಷೆಗೆ ಹಾಜರಾಗದ ಸರ್ಕಾರಿ ನೌಕರರ ವಿರುದ್ಧ ನಾಳೆಯೊಳಗೆ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅನಾರೋಗ್ಯ, ಅಂಗವೈಕಲ್ಯ, ಗರ್ಭಿಣಿ ಸೇರಿದಂತೆ ವಿನಾಯಿತಿ ನೀಡಿದವರ ಹೊರತುಪಡಿಸಿ, ಉಳಿದ ಎಲ್ಲರೂ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಅಕ್ಟೋಬರ್ 7 ರೊಳಗಾಗಿ ಜಿಲ್ಲೆಯ ಎಲ್ಲ ಕುಟುಂಬಗಳ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು,” ಎಂದು ಅವರು ನಿರ್ದೇಶನ ನೀಡಿದರು.
ಸಮಸ್ಯೆ ಎದುರಾದರೆ ಅಮಾನತು ಖಚಿತ
ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಡಿಸಿ ದಿವ್ಯ ಪ್ರಭು ಅವರು ಕಠಿಣ ಎಚ್ಚರಿಕೆ ನೀಡಿದ್ದು, “ಸಮೀಕ್ಷೆದಾರರು ನಿರಾಸಕ್ತಿ ತೋರಿದರೆ, ಕ್ಷೇತ್ರ ಭೇಟಿ ನೀಡದಿದ್ದರೆ, ಮೊಬೈಲ್ ಸ್ವಿಚ್ಡ್ ಆಫ್ ಮಾಡಿದರೆ ಅಥವಾ ಅನಗತ್ಯ ನೆಪಗಳನ್ನು ಹೇಳಿ ಉದಾಸೀನತೆ ತೋರಿಸಿದರೆ, ತಕ್ಷಣ ಮೇಲ್ವಿಚಾರಕರು ತಹಶೀಲ್ದಾರರಿಗೆ ವರದಿ ನೀಡಬೇಕು. ಈ ವರದಿಗಳನ್ವಯ ಅಂತಹವರನ್ನು ಅಮಾನತ್ತುಗೊಳಿಸಲಾಗುತ್ತದೆ ಮತ್ತು ಇಲಾಖಾ ತನಿಖೆಗೆ ಶಿಫಾರಸ್ಸು ಮಾಡಲಾಗುತ್ತದೆ,” ಎಂದು ತಿಳಿಸಿದರು.
ಅಲ್ಲದೆ, ನಿಯೋಜನೆಗೊಂಡಿರುವ ಸಿಬ್ಬಂದಿಗಳು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನದಿಂದ ತೆರಳುವಂತಿಲ್ಲ ಮತ್ತು ರಜೆ ಪಡೆಯುವಂತಿಲ್ಲ ಎಂದೂ ಅವರು ಸೂಚಿಸಿದರು.
5.46 ಲಕ್ಷ ಮನೆಗಳ ಸಮೀಕ್ಷೆಗೆ ಸಿದ್ಧತೆ
ಜಿಲ್ಲೆಯಲ್ಲಿ ಅಂದಾಜು 5,46,098 ಮನೆಗಳಿದ್ದು, ಸಮೀಕ್ಷೆಗಾಗಿ 4,886 ಬ್ಲಾಕ್‌ಗಳನ್ನು ರಚಿಸಲಾಗಿದೆ. 4,671 ಜನ ಸಮೀಕ್ಷೆದಾರರನ್ನು ಮತ್ತು 208 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಸಮೀಕ್ಷಾದಾರರಿಗೆ ಸರ್ಕಾರ ನಿಗದಿಪಡಿಸಿರುವ ಗೌರವಧನವನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದು ಡಿಸಿ ಮಾಹಿತಿ ನೀಡಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು, ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳು ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕು; ತಪ್ಪಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ವೇದಿಕೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ, ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

