
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂಭ್ರಮಕ್ಕೆ ಸಜ್ಜಾಗಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ನಾಳೆ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ನಗರವನ್ನು ನವ ವಧುವಿನಂತೆ ಶೃಂಗಾರಗೊಳಿಸಲಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ.
ಈ ಬಾರಿಯ ದಸರಾ ಉತ್ಸವವನ್ನು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ, ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ನಿರ್ಮಲಾ ಸೀತಾರಾಮನ್, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಅದ್ದೂರಿ ಸಿದ್ಧತೆ, ವಿದ್ಯುತ್ ದೀಪಾಲಂಕಾರದ ವೈಭವ:
ನವರಾತ್ರಿ ಉತ್ಸವದ ಅಂಗವಾಗಿ ಅರಮನೆಯಲ್ಲಿ ಪಾರಂಪರಿಕ ಆಚರಣೆಗಳಿಗೆ ಸಿದ್ಧತೆಗಳು ನಡೆದಿವೆ. ಈ ಬಾರಿ 146 ಕಿ.ಮೀ. ಉದ್ದದ ರಸ್ತೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, 116 ವೃತ್ತಗಳಲ್ಲಿ ಅಳವಡಿಸಿರುವ ಚಲಿಸುವ ದೀಪಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಸೇರಿ ಎಲ್ಲಾ ಕಾರ್ಯಕ್ರಮಗಳ ಪೂರ್ವ ತಯಾರಿಗಳು ಭರದಿಂದ ಸಾಗಿವೆ. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ 114.66 ಲಕ್ಷ ರೂ. ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣ, ರಸ್ತೆ ದುರಸ್ತಿ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ವಿಶೇಷ ಆಕರ್ಷಣೆಗಳು ಮತ್ತು ಭದ್ರತಾ ವ್ಯವಸ್ಥೆ:
ದಸರಾ ಪ್ರಯುಕ್ತ ಕುಪ್ಪಣ್ಣ ಪಾರ್ಕ್ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ವಿವಿಧ ಬಣ್ಣಗಳ ಹೂವಿನ ಗಿಡಗಳು ನೋಡುಗರನ್ನು ಆಕರ್ಷಿಸಲಿವೆ. ಕುಸ್ತಿ ಪಂದ್ಯಾವಳಿ, ಯುವ ದಸರಾ ಮತ್ತು ರಸ ಸಂಜೆ ಕಾರ್ಯಕ್ರಮಗಳು ಕೂಡ ಸಡಗರಕ್ಕೆ ಸಜ್ಜಾಗಿವೆ. ಆನ್ಲೈನ್ನಲ್ಲಿ ಮಾರಾಟ ಮಾಡಲಾಗುತ್ತಿರುವ ‘ಗೋಲ್ಡ್ ಟಿಕೆಟ್’ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ. ಈ ಬಾರಿ ವೈಮಾನಿಕ ಪ್ರದರ್ಶನವನ್ನು ಸಹ ಆಯೋಜಿಸಿದ್ದು, ದಸರಾಕ್ಕೆ ಮತ್ತಷ್ಟು ರಂಗು ಬಂದಿದೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಭದ್ರತೆ ನಿಯೋಜಿಸಲಾಗಿದೆ. ನವರಾತ್ರಿ ಅವಧಿಯಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚುವರಿ ಪೌರಕಾರ್ಮಿಕರು ಹಾಗೂ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಶೇಖ್ ತನ್ನೀರ್ ಆಸಿಫ್ ತಿಳಿಸಿದ್ದಾರೆ.

