‘ಬಾಗಲಕೋಟೆ:ನನಗೆ ಸನ್ಮಾನ ಬೇಡ, ಹಾಸ್ಟೆಲ್ ಸೀಟ್ ಕೊಡಿ’: ವೇದಿಕೆಯಲ್ಲಿ ಸಚಿವ ತಿಮ್ಮಾಪುರ ಎದುರೇ ವಿದ್ಯಾರ್ಥಿನಿ ಆಕ್ರೋಶ

Spread the love

ಬಾಗಲಕೋಟೆ: ಪರೀಕ್ಷೆಯಲ್ಲಿ ಶೇ.88 ಅಂಕ ಗಳಿಸಿದ್ದರೂ ಹಾಸ್ಟೆಲ್‌ನಲ್ಲಿ ಸೀಟ್ ಸಿಗದೆ ಬೇಸತ್ತ ವಿದ್ಯಾರ್ಥಿನಿಯೊಬ್ಬಳು, ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲೇ ಸಚಿವ ಆರ್‌.ಬಿ. ತಿಮ್ಮಾಪುರ ಅವರ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ಮುಧೋಳ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಸಚಿವರಿಗಾಗಿಯೇ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯ ಈ ನೇರ ವಾಗ್ದಾಳಿ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಘಟನೆಯ ವಿವರ
ಸ್ಥಳೀಯ ಸಂಸ್ಥೆಯೊಂದು ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ, ವಿದ್ಯಾರ್ಥಿನಿ ಐಶ್ವರ್ಯಾ ತನ್ನ ಅಳಲನ್ನು ತೋಡಿಕೊಂಡಳು. ವೇದಿಕೆಯಲ್ಲಿ ಮಾತನಾಡಿದ ಆಕೆ, ಹಾಸ್ಟೆಲ್ ಸೀಟ್‌ಗಾಗಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೈಗೊಂಬೆಯಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿದ್ಯಾರ್ಥಿನಿ ಆಕ್ರೋಶವೇನು?
ಹೆಬ್ಬಾಳ ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿನಿ ಐಶ್ವರ್ಯಾ, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.88 ಅಂಕ ಗಳಿಸಿದ್ದಳು. ನಂತರ ಮುಧೋಳ ತಾಲೂಕಿನ ಯಡಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡಿದ್ದಳು. ಮನೆ ದೂರವಿರುವ ಕಾರಣ ಬಿಸಿಎಂ ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸಿದ್ದರೂ, ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದರು. ಇದರಿಂದ ನಿತ್ಯವೂ ಬಸ್‌ನಲ್ಲಿ ಕಾಲೇಜಿಗೆ ಪ್ರಯಾಣಿಸುವ ತೊಂದರೆಯಿಂದ ಬೇಸತ್ತ ಐಶ್ವರ್ಯಾ, ಸಾರ್ವಜನಿಕವಾಗಿ ತನ್ನ ನೋವು ವ್ಯಕ್ತಪಡಿಸಿದ್ದಾಳೆ.

“ನಾನು ಬಡ ಕುಟುಂಬದಿಂದ ಬಂದಿದ್ದರೂ ಒಳ್ಳೆಯ ಅಂಕ ಗಳಿಸಿದ್ದೇನೆ. ಆದರೆ, ಹಾಸ್ಟೆಲ್ ಸೀಟ್ ಸಿಕ್ಕಿಲ್ಲ. ಅಧಿಕಾರಿಗಳನ್ನು ಕೇಳಿದರೆ, ‘ತಿಮ್ಮಾಪುರ ಸಾಹೇಬರು ಹೇಳಿದರೆ ಮಾತ್ರ ಸೀಟ್ ಕೊಡುತ್ತೇವೆ’ ಎನ್ನುತ್ತಾರೆ. ಅವರ ಕಚೇರಿಗೆ ಹೋದರೆ ನಮ್ಮನ್ನು ಮಾತನಾಡಿಸಲೂ ಇಲ್ಲ. ಶೇ.50-55 ಅಂಕ ಪಡೆದವರಿಗೆ ಸೀಟ್ ಸಿಕ್ಕಿದೆ. ಆದರೆ, ನಾನು ಮತ್ತು ನನ್ನ ಗೆಳತಿ ಶೇ.90-95 ಅಂಕ ಪಡೆದರೂ ಬಸ್‌ನಲ್ಲಿ ಪ್ರಯಾಣಿಸಬೇಕಾಗಿದೆ.

ಈ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ನಮ್ಮಂತಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ನಮಗೆ ಸನ್ಮಾನ ಬೇಡ, ಹಾಸ್ಟೆಲ್ ಮತ್ತು ಅಗತ್ಯ ಸವಲತ್ತುಗಳನ್ನು ಒದಗಿಸಿ ಸಾಕು” ಎಂದು ಆಕ್ರೋಶದಿಂದ ಹೇಳಿದ್ದಾಳೆ.
ಈ ಘಟನೆ ವೈರಲ್ ಆದ ನಂತರ, ಜಿಲ್ಲಾಡಳಿತ ವಿದ್ಯಾರ್ಥಿನಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಸಚಿವರ ಜಿಲ್ಲೆಯಲ್ಲಿಯೇ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಕಡೆಗಣನೆ ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *