
ಗದಗ (ಸೆ. 18): ಜಿಲ್ಲೆಯ ಹರ್ಲಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರ್ಮರಣಕ್ಕೀಡಾಗಿದ್ದಾರೆ. ಕಾರು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಗೋವಾ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತರ ಪೈಕಿ ಒರ್ವ ಪೊಲೀಸ್ ಸಿಬ್ಬಂದಿ ಎಂದು ಗುರುತಿಸಲಾಗಿದೆ.
ಘಟನೆಯು ಗುರುವಾದಂದು ನಡೆದಿದೆ. ಕೊಪ್ಪಳದಿಂದ ಗದಗ ಕಡೆಗೆ ಪ್ರಯಾಣಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಹರ್ಲಾಪುರ ಬಳಿ ನಿಯಂತ್ರಣ ಕಳೆದುಕೊಂಡು ಡಿವೈಡರ್ ದಾಟಿದೆ. ಅದೇ ಸಮಯಕ್ಕೆ ಪಣಜಿಯಿಂದ ಹೊಸಪೇಟೆ ಕಡೆಗೆ ತೆರಳುತ್ತಿದ್ದ ಗೋವಾ ಸಾರಿಗೆ ಬಸ್‌ಗೆ ವೇಗವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಅರ್ಜುನ್ ನೆಲ್ಲೂರು (29), ರವಿ ನೆಲ್ಲೂರು (40) ಮತ್ತು ಈರಣ್ಣ ಉಪ್ಪಾರ (32) ಎಂದು ಗುರುತಿಸಲಾಗಿದೆ. ಮೃತರ ಪೈಕಿ ಅರ್ಜುನ್ ಪೊಲೀಸ್ ಇಲಾಖೆಯ ಸಿಬ್ಬಂದಿ ಎಂದು ತಿಳಿದುಬಂದಿದೆ.
ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

