
ಧಾರವಾಡ: ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನರೇಂದ್ರ ಗ್ರಾಮದಲ್ಲಿ ನಡೆದ ಘಟನೆ ರಾಜಕೀಯ ತಿರುವು ಪಡೆದುಕೊಂಡಿತ್ತು. ಸಿಪಿಐ ಕಮತಗಿ ಹಾಗೂ ಪೊಲೀಸ್ ಪೇದೆ ಸೈಯದ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.
ಅಲ್ಲದೇ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೂಡ ನರೇಂದ್ರ ಗ್ರಾಮಕ್ಕೆ ಭೇಟಿ ನೀಡಿ, ಘಟನೆಗೆ ಕಾರಣರಾದ ಸಿಪಿಐ ಕಮತಗಿ ಮತ್ತು ಪೊಲೀಸ್ ಪೇದೆ ಸೈಯದ್ ಅವರನ್ನು ಅಮಾನತುಗೊಳಿಸುವಂತೆ ಎಸ್ಪಿಗೆ ಆಗ್ರಹಿಸಿದ್ದರು.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದೀಗ ಇಬ್ಬರು ಪೊಲೀಸ್ ಪೇದೆಗಳಾದ ಸೈಯದ್ ಹಾಗೂ ಕೃಷ್ಣಾ ಎಂಬುವವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

