
ಕುಂದಗೋಳ: ಹಿಂದೀ ಭಾಷೆಯನ್ನು ಕಲಿಯುವುದರಿಂದ ದೇಶ ಮತ್ತು ವಿದೇಶಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯಬಹುದು. ಕೇಂದ್ರ ಸರ್ಕಾರ ಮತ್ತು ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ವ್ಯವಹಾರ ನಡೆಸಲು ಹಿಂದೀ ಭಾಷೆ ಸಹಕಾರಿಯಾಗುತ್ತದೆ. ಆದ್ದರಿಂದ ಜ್ಞಾನಾರ್ಜನೆಗಾಗಿಯಾದರೂ ಹಿಂದಿ ಭಾಷೆ ಕಲಿಯುವುದು ಸೂಕ್ತ ಎಂದು ಗಾಂಧಿ ಹಿಂದೀ ವಿದ್ಯಾಪೀಠದ ಶ್ರೀ ಎಫ್.ಕೆ. ಬಾಳಿಹಳ್ಳಿಮಠ ಹೇಳಿದರು.
ಪಟ್ಟಣದ ಗಾಂಧಿ ಹಿಂದೀ ವಿದ್ಯಾಪೀಠದ ಆವರಣದಲ್ಲಿ ಹಿಂದೀ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳನ್ನು ಹಿಂದೀ ಭಾಷೆ ಮೂಲಕ ಸುಲಭವಾಗಿ ಅರ್ಥಮಾಡಿಕೊಂಡು ಸದುಪಯೋಗಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರುಸ್ವಾಮಿ ಬಾಳಿಹಳ್ಳಿಮಠ, ಎ.ಬಿ. ಕುಂಬಾರ, ಬಸವರಾಜ ತೆಳಗಿನಮನಿ, ಎಂ.ಸಿ. ಪಾಟೀಲ, ಅನುಭಾವಿ ಜಿ.ಬಿ., ಜ್ಯೋತಿ ಪರಕಾಳೆ, ಮಂಜುಳಾ ಭೋವಿ, ಕವಿತಾ ಮಿಸ್, ಮಾಧುರಿ, ಮಹಾಲಕ್ಷ್ಮೀ ಕುಂಬಾರ ಸೇರಿದಂತೆ ಶಿಕ್ಷಕರು ಹಾಜರಿದ್ದರು. ಹಿಂದೀ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಹಿಂದೀ ಗೀತ ಸ್ಪರ್ಧೆ, ಶುದ್ಧ ಬರಹ ಮತ್ತು ಆಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು. ಅಂಬಿಕಾ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿಗಳು ಹಿಂದೀ ಪ್ರಾರ್ಥನಾ ಗೀತೆ ಹಾಡಿದರು.

