ದಸರಾ ಉದ್ಘಾಟನೆ ವಿರುದ್ಧದ ಅರ್ಜಿ ವಜಾ: ಹೈಕೋರ್ಟ್‌ನಲ್ಲಿ ಪ್ರತಾಪ ಸಿಂಹಗೆ ಹಿನ್ನಡೆ

Spread the love

ಬೆಂಗಳೂರು: ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬುಕರ್ ಪುರಸ್ಕೃತ ಲೇಖಕಿ ಬಾನು ಮುಫ್ಲಾಕ್ ಅವರನ್ನು ಆಹ್ವಾನಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರ ವಿಭಾಗೀಯ ನ್ಯಾಯಪೀಠವು, ಮಾಜಿ ಸಂಸದ ಪ್ರತಾಪ ಸಿಂಹ ಮತ್ತು ಇತರ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.

ಅರ್ಜಿಯ ಆಕ್ಷೇಪವೇನು?
ನಾಡಹಬ್ಬ ದಸರಾ ಹಿಂದೂ ಧಾರ್ಮಿಕ ಸಂಪ್ರದಾಯ ಹಾಗೂ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ಹಾಗಾಗಿ, ಹಿಂದೂ ಧರ್ಮಕ್ಕೆ ಸೇರದ ಬಾನು ಮುಫ್ಲಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಆಗ್ರಹಿಸಿದ್ದರು.
ಆದರೆ, ಸರ್ಕಾರದ ಈ ನಿರ್ಧಾರದಿಂದ ಅರ್ಜಿದಾರರ ಯಾವುದೇ ಕಾನೂನಾತ್ಮಕ ಅಥವಾ ಸಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ಅರ್ಜಿಗಳನ್ನು ವಜಾಗೊಳಿಸಿ ಆದೇಶ ನೀಡಿದೆ. ಆದೇಶದ ವಿವರವಾದ ಕಾರಣಗಳನ್ನು ವಿಸ್ತೃತ ಆದೇಶದಲ್ಲಿ ಉಲ್ಲೇಖಿಸಲಾಗುವುದು ಎಂದು ಪೀಠ ತಿಳಿಸಿದೆ.

ಅರ್ಜಿದಾರರಿಗೆ ದಂಡ ವಿಧಿಸುವಂತೆ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಇದಕ್ಕೆ ನ್ಯಾಯಪೀಠ ನಿರಾಕರಿಸಿತು.
ಈ ತೀರ್ಪಿನ ಮೂಲಕ ರಾಜ್ಯ ಸರ್ಕಾರವು ಬಾನು ಮುಫ್ಲಾಕ್ ಅವರ ಆಹ್ವಾನವನ್ನು ಮುಂದುವರಿಸಲು ಹಾದಿ ಸುಗಮವಾಗಿದೆ.

Leave a Reply

Your email address will not be published. Required fields are marked *