ಗಿಗ್ ಕಾರ್ಮಿಕರ ಪಾಲಿಗೆ ಅಭಯದಾತ: ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್

Spread the love

ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಮಿಕ ಇಲಾಖೆಯಲ್ಲಿ ಮಹತ್ವದ ಕ್ರಾಂತಿ ಮಾಡಲು ಹೊರಟಿದ್ದಾರೆ. ಶ್ರಮಿಕ ವರ್ಗದ ಕಾರ್ಮಿಕರ ಕಷ್ಟ-ಕಾರ್ಪಣ್ಯಗಳನ್ನು ನೀಗಿಸಲು ಹಾಗೂ ಅವರ ಕುಟುಂಬಗಳಿಗೆ ಭದ್ರತೆ ಒದಗಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಅವರು ಜನಮನ ಗೆದ್ದಿದ್ದಾರೆ.

ಅದರಲ್ಲೂ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ಜಾರಿ ಮಾಡುವ ಮೂಲಕ ಒಂದು ಮಹತ್ವದ ಕಾರ್ಯ ಮಾಡಿದ್ದಾರೆ.
ರಾಜ್ಯ ಕಾರ್ಮಿಕ ಇಲಾಖೆ ಜಾರಿಗೊಳಿಸಿದ ಮಹತ್ವದ ಯೋಜನೆಗಳಲ್ಲಿ ಗಿಗ್ ಕಾರ್ಮಿಕರ ವಿಮಾ ಯೋಜನೆಯೂ ಒಂದು. ಇಂದಿನ ದಿನಮಾನಗಳಲ್ಲಿ ಮನೆ, ಕಚೇರಿ, ವಾಹನ, ಆರೋಗ್ಯ ಹೀಗೆ ಎಲ್ಲದಕ್ಕೂ ವಿಮೆ ಮಾಡಿಸಲಾಗುತ್ತದೆ. ಇದೆಲ್ಲದಕ್ಕಿಂತ ಜೀವ ವಿಮೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಇಂದು ಹೆಚ್ಚು ಪ್ರವರ್ಧಮಾನದಲ್ಲಿರುವ ಗಿಗ್ ಆರ್ಥಿಕತೆಯ ವಲಯದಲ್ಲಿ, ಗಿಗ್ ಕಾರ್ಮಿಕರು ಟ್ರಾಫಿಕ್ ದಟ್ಟಣೆಯ ನಡುವೆ ಜೀವ ಕೈಯಲ್ಲಿ ಹಿಡಿದು ಗ್ರಾಹಕರಿಗೆ ಆಹಾರ ಹಾಗೂ ಇನ್ನಿತರ ಉತ್ಪನ್ನಗಳನ್ನು ತಲುಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತಹ ಗಿಗ್ ಕಾರ್ಮಿಕರಿಗೆ ಸಚಿವ ಸಂತೋಷ್ ಲಾಡ್ ಅವರು ಭರವಸೆ ನೀಡಿದ್ದಾರೆ.

ಲಕ್ಷಾಂತರ ಕಾರ್ಮಿಕರಿಗೆ ನೆರವು
ಇ-ಕಾಮರ್ಸ್ ಸಂಸ್ಥೆಗಳ ಜೊತೆ ಡೆಲಿವರಿ ಕೆಲಸ ಮಾಡುವ ಸಾಕಷ್ಟು ಜನರು ಅಸಂಘಟಿತರಾಗಿದ್ದು, ಅವರಿಗೆ ಯಾವುದೇ ಜೀವನ ಭದ್ರತೆ ಇರಲಿಲ್ಲ. ಇದನ್ನು ಮನಗಂಡ ಕಾರ್ಮಿಕ ಇಲಾಖೆ, ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸುವಲ್ಲಿ ಸಚಿವ ಸಂತೋಷ್ ಲಾಡ್ ಸಾಕಷ್ಟು ಕಾಳಜಿ ಮತ್ತು ಶ್ರಮ ವಹಿಸಿದ್ದಾರೆ. ಈವರೆಗೆ ಯಾವುದೇ ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದ ಗಿಗ್ ಕಾರ್ಮಿಕರಿಗೆ ಈ ವಿಮಾ ಯೋಜನೆ ಜೀವನ ಭದ್ರತೆ ಒದಗಿಸುತ್ತಿದೆ.
ಒಂದು ವೇಳೆ ಗಿಗ್ ಕಾರ್ಮಿಕರು ಮೃತಪಟ್ಟರೆ ಅಥವಾ ತೀವ್ರ ಸಂಕಷ್ಟಕ್ಕೆ ಒಳಗಾದರೆ ವಿಮಾ ಸೌಲಭ್ಯ ಆಧಾರವಾಗಲಿದೆ. ಇಡೀ ದೇಶದಲ್ಲೇ ಮೊದಲ ಬಾರಿಗೆ ಇಂತಹ ವಿಮಾ ಯೋಜನೆಯನ್ನು ಜಾರಿಗೊಳಿಸಿದ ಕೀರ್ತಿ ಕರ್ನಾಟಕ ಸರ್ಕಾರಕ್ಕೆ ಸಲ್ಲುತ್ತದೆ. ಈ ಯೋಜನೆ ಲಾಭ ಪಡೆದ ಗಿಗ್ ಕಾರ್ಮಿಕರು ಸಚಿವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಯೋಜನೆಯ ವಿವರಗಳು
ಸ್ವಿಗ್ಗಿ, ಜೊಮೆಟೊ, ಬ್ಲಿಂಕಿಟ್, ಡಾಮಿನೋಸ್ ಮುಂತಾದ ಸಂಸ್ಥೆಗಳಲ್ಲಿ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸುವ ಗಿಗ್ ಕಾರ್ಮಿಕರು, ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್, ಪೋರ್ಟರ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ಕೆಲಸ ಮಾಡುವ ಎಲ್ಲಾ ಅಸಂಘಟಿತ ಕಾರ್ಮಿಕರು ಈ ವಿಮಾ ಸೌಲಭ್ಯ ಪಡೆಯಬಹುದಾಗಿದೆ.

ಈ ಯೋಜನೆಯ ಸೌಲಭ್ಯ ಪಡೆಯಲು ಗಿಗ್ ಕಾರ್ಮಿಕರು ಇ-ಶ್ರಮ್ ಪೋರ್ಟಲ್ ಅಥವಾ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

  • ಮರಣ ಪರಿಹಾರ: ಫಲಾನುಭವಿಯ ಮರಣದ ನಂತರ ಕಾನೂನುಬದ್ಧ ವಾರಸುದಾರರಿಗೆ ₹2 ಲಕ್ಷ ಜೀವ ವಿಮೆ ಪರಿಹಾರ ನೀಡಲಾಗುತ್ತದೆ. ಮರಣದ ಸಂದರ್ಭದಲ್ಲಿ ಅಪಘಾತದಿಂದ ಆಗಿದ್ದರೆ ₹2 ಲಕ್ಷ ಅಪಘಾತ ವಿಮಾ ಪರಿಹಾರ ಮತ್ತು ₹2 ಲಕ್ಷ ಜೀವ ವಿಮಾ ಪರಿಹಾರ ಸೇರಿ ಒಟ್ಟು ₹4 ಲಕ್ಷ ಪರಿಹಾರ ನೀಡಲಾಗುತ್ತದೆ.
  • ಅಪಘಾತ ಪರಿಹಾರ: ಸಂಪೂರ್ಣ, ಶಾಶ್ವತ ಅಥವಾ ಭಾಗಶಃ ದುರ್ಬಲತೆ (ಶೇಕಡಾವಾರು ದುರ್ಬಲತೆಯ ಆಧಾರದ ಮೇಲೆ) ಉಂಟಾದರೆ ₹2 ಲಕ್ಷ ಹಣ ಪರಿಹಾರ ನೀಡಲಾಗುತ್ತದೆ.
  • ಆಸ್ಪತ್ರೆ ವೆಚ್ಚ ಮರುಪಾವತಿ: ಆಸ್ಪತ್ರೆ ವೆಚ್ಚ ಮರುಪಾವತಿಯಾಗಿ ₹1 ಲಕ್ಷದವರೆಗೆ ನೀಡಲಾಗುತ್ತದೆ.

ಎಲ್ಲಾ ಪರಿಹಾರ ಮೊತ್ತವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಡಿಬಿಟಿ/ನೆಫ್ಟ್ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಫಲಾನುಭವಿಯು ಮರಣದ ಸಮಯದಲ್ಲಿ ಅವಿವಾಹಿತನಾಗಿದ್ದಲ್ಲಿ ತಾಯಿ, ತಂದೆ ಹಾಗೂ ವಿವಾಹಿತನಾಗಿದ್ದಲ್ಲಿ ಹೆಂಡತಿ ಮತ್ತು ಮಕ್ಕಳು ಕಾನೂನುಬದ್ಧ ವಾರಸುದಾರರಾಗಿರುತ್ತಾರೆ.
ಒಟ್ಟಿನಲ್ಲಿ, ಕಾರ್ಮಿಕ ಇಲಾಖೆಯ ಸಚಿವರಾಗಿ ಸಂತೋಷ್ ಲಾಡ್ ಮಹತ್ವದ ಕಾರ್ಯವನ್ನು ಮಾಡಿದ್ದು, ಇದರಿಂದ ಲಕ್ಷಾಂತರ ಕಾರ್ಮಿಕ ಕುಟುಂಬಗಳಿಗೆ ನೆರವು ದೊರೆತಂತಾಗಿದೆ.

Leave a Reply

Your email address will not be published. Required fields are marked *