ಮಹಿಳಾ ಸಬಲೀಕರಣಕ್ಕೆ ಸಾಕ್ಷರತೆಯೇ ಪ್ರಬಲ ಅಸ್ತ್ರ: ಡಾ. ಪ್ರಜ್ಞಾ ಮತ್ತಿಹಳ್ಳಿ

Spread the love

ಧಾರವಾಡ: ವ್ಯಕ್ತಿಯ ಜೀವನದಲ್ಲಿ ಶಿಕ್ಷಣವು ಒಂದು ಮಹಾನ್ ಶಕ್ತಿ. ಅದರಲ್ಲೂ ಮಹಿಳೆಯರು ಅಜ್ಞಾನ ಮತ್ತು ಶೋಷಣೆಯಿಂದ ಹೊರಬರಲು ಸಾಕ್ಷರತೆಯು ಒಂದು ಪರಿಣಾಮಕಾರಿ ಸಾಧನವಾಗಿದೆ ಎಂದು ಕಿತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘದ (ಕ.ವಿ.ವ.ಸಂ.) “ಶಿಕ್ಷಣ ಮಂಟಪ”ವು, ನಗರದ ಶ್ರೀ ಸತ್ಯಸಾಯಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ವಿಶ್ವ ಸಾಕ್ಷರತಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ‘ಸಾಕ್ಷರತೆ ಮತ್ತು ಮಹಿಳಾ ಸಬಲೀಕರಣ’ ಕುರಿತ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಇಂದಿನ ಸಂಕೀರ್ಣ ಸಮಾಜದಲ್ಲಿ ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ಶೋಷಣೆಯ ಮೂಲ ಕಾರಣವನ್ನು ಅಕ್ಷರ ಕಲಿತು ಅರಿತುಕೊಳ್ಳಬೇಕು. ಕೇವಲ ಸಾಕ್ಷರತೆ ಮಾತ್ರವಲ್ಲದೆ, ಅದರ ಜೊತೆಗೆ ಅರಿವೂ ಅಷ್ಟೇ ಮುಖ್ಯವಾಗಿದೆ.

ಸ್ವಾಭಿಮಾನದಿಂದ ಮತ್ತು ಸಶಕ್ತರಾಗಿ ಬದುಕಲು ಸಾಕ್ಷರತೆಯು ಪ್ರಬಲವಾದ ಅಸ್ತ್ರವಾಗಿದೆ. ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಮಹಿಳೆಯರು ಧ್ವನಿ ಎತ್ತಲು ಸಾಕ್ಷರತೆಯು ಅತ್ಯಗತ್ಯವಾಗಿದೆ ಎಂದರು. ಈ ನಿಟ್ಟಿನಲ್ಲಿ, ಮಹಿಳೆಯರನ್ನು ಸಬಲಗೊಳಿಸಲು ಧಾರವಾಡದ ವನಿತಾ ಸೇವಾ ಸಮಾಜದ ಭಾಗೀರಥಿಬಾಯಿ ಪುರಾಣಿಕ ಮತ್ತು ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದ ಕೊಡುಗೆ ಅನನ್ಯವಾದುದು ಎಂದು ಸ್ಮರಿಸಿದರು.

ನಂತರ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಯು ಸಾಕ್ಷರತೆಯಿಂದ ಮಾತ್ರ ಸಾಧ್ಯ. ಸಾಕ್ಷರತೆಯು ನಮ್ಮ ರಾಷ್ಟ್ರದ ಪ್ರತಿಷ್ಠೆಯ ಸಂಕೇತವಾಗಿದೆ. ತೊಂಬತ್ತರ ದಶಕದಲ್ಲಿ ಆರಂಭಗೊಂಡ ಸಾಕ್ಷರತಾ ಕಾರ್ಯಕ್ರಮವು ಸ್ವಾತಂತ್ರ್ಯಾ ನಂತರದ ಎರಡನೇ ಅತಿದೊಡ್ಡ ಆಂದೋಲನವಾಗಿ ಇತಿಹಾಸ ಸೃಷ್ಟಿಸಿದೆ. ಪ್ರತಿಯೊಬ್ಬ ಮಹಿಳೆಯೂ ಸಾಕ್ಷರತೆಯ ಮೂಲಕ ನಮ್ಮ ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ, ಸಾಕ್ಷರತಾ ಕಾರ್ಯಕ್ರಮದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ವಿಜಯಕಲಾ ಬಡಿಗೇರ ಅವರನ್ನು ಕ.ವಿ.ವ. ಸಂಘದ ಪರವಾಗಿ ಗಣ್ಯರು ಸನ್ಮಾನಿಸಿ ಗೌರವಿಸಿದರು.

ಶೈಕ್ಷಣಿಕ ನಿರ್ದೇಶಕ ಜಿ.ಎಂ. ಗಣಾಚಾರ ಮತ್ತು ಶ್ರೀಶೈಲ ರಾಚಣ್ಣವರು ಮಾತನಾಡಿದರು. ಕ.ವಿ.ವ. ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೊ. ಸವಿತಾ ಪೋತದಾರ ಸ್ವಾಗತಿಸಿ ನಿರೂಪಿಸಿದರೆ, ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಎಲಿಗಾರ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸತ್ಯಸಾಯಿ ಎಜುಕೇಷನ್ ಟ್ರಸ್ಟ್‌ನ ಆಡಳಿತ ಮಂಡಳಿ ಕಾರ್ಯದರ್ಶಿ ಎನ್. ಮಂಜುನಾಥ್, ಸದಸ್ಯ ಕೃಷ್ಣಮೂರ್ತಿ ನಾಡಗೇರ, ಶಂಕರ ಕುಂಬಿ, ಎನ್.ವೈ. ಸುಣಗಾರ, ಅಶ್ವಿನಿ ಇಂಚಲ್, ಹಾಗೂ ಕಾಲೇಜಿನ ಪ್ರಾಧ್ಯಾಪಕರು, ಶಿಕ್ಷಣ ಮಂಟಪದ ಸಲಹಾ ಸಮಿತಿ ಸದಸ್ಯರು ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *