ಹದಗೆಟ್ಟ ಹೆದ್ದಾರಿ, ಬಲಿ ಕೊಟ್ಟ ಪ್ರಾಣ: ಕೊಟ್ಟಾರ ಚೌಕಿಯಲ್ಲಿ ರಸ್ತೆ ಗುಂಡಿಗೆ ಬಿದ್ದು ಮಹಿಳೆ ಸಾವು; ಲೋಕೋಪಯೋಗಿ ಇಲಾಖೆಗೆ ನಾಚಿಕೆಯಾಗಬೇಕು! ಪದ್ಮರಾಜ

Spread the love

ಮಂಗಳೂರು: ನಗರದ ಹೃದಯಭಾಗದಲ್ಲಿರುವ ಕೊಟ್ಟಾರ ಚೌಕಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಲಾಗಿರುವ ಮರಣ ಹೊಂಡಕ್ಕೆ ಬಿದ್ದು ಮಹಿಳೆಯೊಬ್ಬರು ಮಂಗಳವಾರ ದಾರುಣವಾಗಿ ಸಾವನ್ನಪ್ಪಿದ್ದಾರೆ. ರಸ್ತೆಗಳ ದುರವಸ್ಥೆಯ ಬಗ್ಗೆ ಸಾರ್ವಜನಿಕರ ದೂರುಗಳ ಹೊರತಾಗಿಯೂ ನಿರ್ಲಕ್ಷ್ಯ ವಹಿಸಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಲೋಕೋಪಯೋಗಿ ಇಲಾಖೆಯ ಬೇಜವಾಬ್ದಾರಿತನಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.

ಘಟನೆಯ ವಿವರಗಳ ಪ್ರಕಾರ, ಉಡುಪಿ ಜಿಲ್ಲೆಯ ಪರ್ಕಳ ಮೂಲದ ಮತ್ತು ಸದ್ಯ ಚಿತ್ರಾಪುರದಲ್ಲಿ ನೆಲೆಸಿದ್ದ ಮಾಧವಿ (38) ಎಂಬುವವರು, ತಮ್ಮ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಹೆದ್ದಾರಿಯಲ್ಲಿದ್ದ ಬೃಹತ್ ಗುಂಡಿಯನ್ನು ತಪ್ಪಿಸಲು ಹೋಗಿ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಮೀನು ಸಾಗಿಸುವ ಲಾರಿಯೊಂದು ಅವರ ಮೇಲೆ ಹರಿದು, ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಮಾಧವಿ ಅವರು ಕುಂಟಿಕಾನದ
ಎ.ಜೆ ಆಸ್ಪತ್ರೆಯಲ್ಲಿ ರಕ್ತನಿಧಿ ವಿಭಾಗದಲ್ಲಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಲೋಕೋಪಯೋಗಿ ಇಲಾಖೆಗೆ ನಾಚಿಕೆಯಾಗಬೇಕು!
ಈ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಪದ್ಮರಾಜ್, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಭರಿತ ವಾಗ್ದಾಳಿ ನಡೆಸಿರುವ ಅವರು, “ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ರಸ್ತೆಗಳ ದಯನೀಯ ಸ್ಥಿತಿಯಿಂದಾಗಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೂ, ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮೂಕರಾಗಿದ್ದಾರೆ. ಇವರು ಕೇವಲ ಸಂಬಳ ಪಡೆಯುವುದಕ್ಕಾಗಿಯೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆಯೇ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
“ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಜೀವಹಾನಿಗೆ ಹೆದ್ದಾರಿ ಇಲಾಖೆಯ ಮುಖ್ಯ ಅಧಿಕಾರಿಗಳೇ ನೇರ ಹೊಣೆ. ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ ಅಂಥವರು ಮನೆಗೆ ಹೋಗಲಿ” ಎಂದು ಹರಿಹಾಯ್ದಿದ್ದಾರೆ.

ಲೋಕೋಪಯೋಗಿ ಇಲಾಖೆಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತಿಮವಾಗಿ, ಮೃತ ಮಾಧವಿ ಅವರ ಕುಟುಂಬಕ್ಕೆ ಇಲಾಖೆಯೇ ನೇರವಾಗಿ ಜವಾಬ್ದಾರಿ ವಹಿಸಿ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಜಿಲ್ಲೆಯ ಸಂಸದರು ಹಾಗೂ ಶಾಸಕರು ತಕ್ಷಣ ಗಮನಹರಿಸಿ ಜೀವಹಾನಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Leave a Reply

Your email address will not be published. Required fields are marked *