ಮಂಗಳೂರು:ನಗರದ ಬಲ್ಮಠ ಕೆಟಿಸಿ ಕ್ಯಾಂಪಸ್ ಬಿಷಪ್ ಜತ್ತನ್ನ ಸಂಭಾಗಣದಲ್ಲಿ ‘ಜನನುಡಿ’ ಸಮ್ಮೇಳನದ ಯುವಜನ ರಾಜಕಾರಣ ದಿಕ್ಕು-ಭವಿಷ್ಯ-ಸವಾಲು ಘೋಷವಾಕ್ಯದೊಂದಿಗೆ ಪುಸ್ತಕ ಮಳಿಗೆಯನ್ನು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಉದ್ಘಾಟಿಸಿ ಮಾತನಾಡಿದರು.
“”ಕರ್ನಾಟಕದ ಸಂದಿಗ್ಧ ಕಾಲ ಘಟ್ಟದಲ್ಲಿ ಪುಸ್ತಕ ಮೇಳ ನಡೆಯುತ್ತಿದೆ. ಇವತ್ತು ಪುಸ್ತಕವನ್ನು ಸಂತೆಯನ್ನಾಗಿ ಮಾಡಲಾಗಿದೆ. ಇಂತಹ ವಿದ್ಯಮಾನಗಳ ಹಿಂದೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ಪುಸ್ತಕ ಸಂತೆಗೆ ಬಂಡವಾಳ ಹಾಕುವವರು ಯಾರು? ಯಾವ ಕಾರಣಕ್ಕೆ ಬಂಡವಾಳ ಹಾಕುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡರೆ ಅದರ ಸ್ವರೂಪ ಗೊತ್ತಾಗುತ್ತದೆ. ಬಂಡವಾಳಶಾಹಿಗಳ ಅಡಿಯಲ್ಲಿ ಪುಸ್ತಕಗಳನ್ನು ಇರಿಸುವಂತೆ ಮಾಡುತ್ತಿದ್ದಾರೆ. ಬಂಡಾವಳ ಶಾಹಿಗಳ ಅಡಿಯಲ್ಲಿ ಇಡುತ್ತಿದ್ದಾರೆ” ಎಂದರು. “ಈ ಜನನುಡಿ ಆಶಯಗಳನ್ನು ಈಡೇರಿಸುವ, ಎಚ್ಚರಿಸುವ ಕೆಲಸ ಆಗಲಿ” ಎಂದು ಹೇಳಿದರು.
ಹಿರಿಯ ಪತ್ರಕರ್ತ ಅನಿಲ್ಹೊ ಹೊಸಮನಿ ಮಾತನಾಡಿ, ವಿಜಯಪುರದಲ್ಲಿ ಬರಗಾಲವಿದೆ. ಅಲ್ಲದೆ ಭೌತಿಕವಾಗಿ ಹಾಗೂ ಬೌದ್ಧಿಕವಾಗಿ ಬರಗಾಲ ಇದೆ. ಕೆಲವು ತಿಂಗಳುಗಳ ಹಿಂದೆ ನಮ್ಮ ವಿಜಯಪುರದಲ್ಲಿ ಮೇ ಸಾಹಿತ್ಯ ಬಳಗದ ವತಿಯಿಂದ ಐದು ದಿನಗಳ ಪುಸ್ತಕ ಮೇಳ ಆಯೋಜಿಸಿದ್ದೆವು ಅದು ತುಂಬಾ ಯಶಸ್ವಿಯಾಯಿತು. ಸಾಮಾಜಿಕ ಹಾಗೂ ಸಾಮುದಾಯಿಕ ಜಾಗೃತಿ ಮತ್ತು ಅರಿವು ಮೂಡಿಸುವಂತಹ ಪುಸ್ತಕಗಳಿಗೆ ಮಾತ್ರ ಅವಕಾಶವಿತ್ತು. ಬೇರೆ ಪುಸ್ತಕಗಳ ಪ್ರದರ್ಶನಕ್ಕೆಅವಕಾಶ ಕೊಟ್ಟಿರಲಿಲ್ಲ ಎಂದರು. ‘ಇಲ್ಲಿ ಎಡಪಂಥೀಯ ಪುಸ್ತಕಗಳನ್ನು ಯಾಕೆ ಇಟ್ಟಿದ್ದೀರಿ’. ಎಂದು ಕೇಳಿದಾಗ, ವೈಚಾರಿಕ, ವೈಜ್ಞಾನಿಕತೆಯನ್ನು ಬೆಳೆಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಹೇಳಿದೆ” ಎಂದರು.
ಕಾರ್ಪೋರೆಟ್ ಪುಸ್ತಕ ಸಂತೆಗಳನ್ನು ಮಾಡುತ್ತಿದ್ದಾರೆ. ಸಾಹಿತಿಗಳು, ಪ್ರಗತಿಪರ ಅಂದುಕೊಳ್ಳುವರು, ವೈಚಾರಿಕವಾಗಿ ಇರುವವರು, ಬದ್ಧತೆ ಇರುವವರು ಎಲ್ಲಂದರಲ್ಲಿ ಭಾಗವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳ ಜವಾಬ್ದಾರಿ ಮುಖ್ಮ ಮತ್ತು ಪ್ರಕಾಶಕರು ಎಂತಹ ಪುಸ್ತಕಗಳನ್ನು ಪ್ರಕಟಿಸಬೇಕು ಎಂಬುದನ್ನು ಆಲೋಚಿಸಬೇಕಿದೆ” ಎಂದು ಹೇಳಿದರು.
ಡಾ. ಗಣನಾಥ ಎಕ್ಕಾರು ಮಾತನಾಡಿ, “2013ರಲ್ಲಿ ಆರಂಭವಾದ ಜನನುಡಿ ಮತ್ತೆ ಪ್ರಾರಂಭ ಆಗಿದೆ. ಸಂವಿಧಾನ ವಿರೋಧಿಗಳಿಗೆ ಪ್ರತಿರೋಧ ವ್ಯಕ್ತಪಡಿಸುವ ಕಾಲ ಬಂದಿದೆ. ಎಲ್ಲರೂ ಒಟ್ಟಾಗಿ ಚಿಂತಿಸುವಲ್ಲಿ ಜನನುಡಿ ಸಹಾಯವಾಗುತ್ತದೆ” ಎಂದರು.