
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗಿಂತ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಆರೋಪಗಳ ಸುರಿಮಳೆಗೈದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಜಾಹೀರಾತುಗಳಿಗಾಗಿ ಬರೋಬ್ಬರಿ ₹473 ಕೋಟಿ ವೆಚ್ಚ ಮಾಡಿದೆ. ಅಂದರೆ ಪ್ರತಿದಿನ ಸರಾಸರಿ ₹43 ಲಕ್ಷಕ್ಕೂ ಅಧಿಕ ಹಣವನ್ನು ರಸ್ತೆ ನಿರ್ಮಾಣ, ಉದ್ಯೋಗ ಸೃಷ್ಟಿ ಅಥವಾ ರೈತರ ಕಲ್ಯಾಣಕ್ಕಾಗಿ ಬಳಸುವ ಬದಲು ಸರ್ಕಾರದ ಸ್ವಪ್ರಚಾರಕ್ಕಾಗಿ ವ್ಯಯಿಸಲಾಗಿದೆ ಎಂದು ತಮ್ಮ ಎಕ್ಸ್ (X) ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಹಾಲಿನ ದರ ಏರಿಕೆಯಾಗುತ್ತಿದೆ. ಬಸ್ ಪ್ರಯಾಣ ದರ ಹೆಚ್ಚಳವಾಗಿದೆ. ವಿದ್ಯುತ್ ಸೇರಿದಂತೆ ಅಗತ್ಯ ಸೇವೆಗಳು ದುಬಾರಿಯಾಗುತ್ತಿವೆ. ರೈತರು ಬರಗಾಲ, ಬೆಳೆ ನಷ್ಟ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಯುವಜನತೆಗೆ ಉದ್ಯೋಗಾವಕಾಶಗಳು ಸಿಗದೆ ಪರದಾಡುವಂತಾಗಿದೆ. ರಾಜಧಾನಿ ಬೆಂಗಳೂರಿನ ರಸ್ತೆಗಳು ಹದಗೆಟ್ಟು ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ. ಮತ್ತೊಂದೆಡೆ ಗುತ್ತಿಗೆದಾರರು ತಾವು ನಿರ್ವಹಿಸಿದ ಕಾಮಗಾರಿಗಳ ಬಾಕಿ ಬಿಲ್‌ಗಳ ಪಾವತಿಗಾಗಿ ಕಾಯುತ್ತಿದ್ದಾರೆ ಎಂದು ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ತನ್ನ ಗ್ಯಾರಂಟಿ ಯೋಜನೆಗಳನ್ನು ದೊಡ್ಡ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ಈ ಯೋಜನೆಗಳ ಅನುಷ್ಠಾನ ಮತ್ತು ಆರ್ಥಿಕ ನಿರ್ವಹಣೆಯಲ್ಲಿಯೂ ಸವಾಲುಗಳು ಎದುರಾಗುತ್ತಿವೆ. ಜನರಿಗೆ ನೀಡಿದ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸುವ ಬದಲು, ಅವುಗಳ ಪ್ರಚಾರಕ್ಕೆ ಸರ್ಕಾರ ಹೆಚ್ಚಿನ ಆಸಕ್ತಿ ತೋರುತ್ತಿದೆ ಎಂದು ಟೀಕಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಕೊರತೆಯ ನೆಪ ಹೇಳುವ ಸರ್ಕಾರ, ಪ್ರಚಾರದ ವಿಚಾರ ಬಂದಾಗ ಮಾತ್ರ ಖಜಾನೆಯಲ್ಲಿ ಹಣಕ್ಕೆ ಕೊರತೆಯಿಲ್ಲವೇ? ಜನರು ಪ್ರತಿ ಪತ್ರಿಕೆಯಲ್ಲೂ ಮುಖ್ಯಮಂತ್ರಿಗಳ ಭಾವಚಿತ್ರ ನೋಡಲು ಮತ ಹಾಕಿಲ್ಲ. ಬದಲಾಗಿ ಉತ್ತಮ ರಸ್ತೆಗಳು, ಉದ್ಯೋಗಾವಕಾಶಗಳು, ರೈತರಿಗೆ ನೆರವು, ಗುತ್ತಿಗೆದಾರರಿಗೆ ಬಾಕಿ ಹಣದ ಪಾವತಿ ಹಾಗೂ ಜನಸಾಮಾನ್ಯರಿಗೆ ಕೈಗೆಟುಕುವ ಜೀವನವನ್ನು ನಿರೀಕ್ಷಿಸಿ ಮತ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಸಾಧನೆಯನ್ನು ಅದು ನೀಡುವ ಜಾಹೀರಾತುಗಳ ಸಂಖ್ಯೆಯಿಂದ ಅಳೆಯಬಾರದು. ಜನರ ಜೀವನಮಟ್ಟದಲ್ಲಿ ತಂದಿರುವ ಸುಧಾರಣೆಯಿಂದ ಅಳೆಯಬೇಕು. ಸಾರ್ವಜನಿಕರ ಹಣವನ್ನು ಜನಕಲ್ಯಾಣಕ್ಕಾಗಿ ಬಳಸಬೇಕೇ ಹೊರತು ರಾಜಕೀಯ ಸ್ವಪ್ರಚಾರಕ್ಕಾಗಿ ಅಲ್ಲ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸಾಧನೆಗಿಂತ ಪ್ರಚಾರವೇ ಹೆಚ್ಚಾಗಿದೆ. ಭರವಸೆಗಳಿವೆ, ಆದರೆ ಸಮರ್ಪಕ ಅನುಷ್ಠಾನವಿಲ್ಲ; ನೆಪಗಳಿವೆ, ಆದರೆ ಹೊಣೆಗಾರಿಕೆಯಿಲ್ಲ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
‘ಅಭಿವೃದ್ಧಿ ಇಲ್ಲ, ಸಾಧನೆ ಇಲ್ಲ, ಆದರೆ ಪ್ರಚಾರಕ್ಕೆ ಮಾತ್ರ ಬರವಿಲ್ಲ. ಅಭಿವೃದ್ಧಿ ಶೂನ್ಯ, ಪ್ರಚಾರವೇ ಹೀರೋ. ಇದೇ ಕಾಂಗ್ರೆಸ್ ಸರ್ಕಾರದ ನೈಜ ಆಡಳಿತ ವರದಿ’ ಎಂದು ವಿಜಯೇಂದ್ರ ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
