
ಬೆಂಗಳೂರು: ಪತ್ನಿ ಮೇಲಿನ ಸಿಟ್ಟಿಗೆ ಆಕೆಯ ಕುಟುಂಬದವರ ಮೇಲೆಯೇ ಕ್ರೌರ್ಯ ಮೆರೆದಿರುವ ಆರೋಪಿಯೊಬ್ಬ ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ನಗರದ ರಾಜಾಜಿನಗರದ ಭಾಷ್ಯಂ ಸರ್ಕಲ್ ಸಮೀಪದ ಮನೆಯಲ್ಲಿ ಏಳು ಜನರ ಶವಗಳು ಪತ್ತೆಯಾಗಿದ್ದು, ಕ್ಯಾಬ್ ಚಾಲಕ ಶೇಖರ್ ಎಂಬಾತನೇ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಆರೋಪಿಯು ಮನೆಯಲ್ಲಿದ್ದ ಒರಳು ಕಲ್ಲಿನಿಂದ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ, ಎರಡು ದಿನಗಳ ಅಂತರದಲ್ಲಿ ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿಕೊಂಡು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ತಪ್ಪಲಿನಲ್ಲಿ ಎಸೆದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಯಿಂದ ಹತ್ಯೆಗೀಡಾದವರನ್ನು ಪತ್ನಿ ಸುನೀತಾ, ಅತ್ತೆ ರೂಪವತಿ, ಅತ್ತೆಯ ಇಬ್ಬರು ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ದಿವ್ಯಾ ಹಾಗೂ ನಳಿನಿ ಮತ್ತು ಶಿವಕುಮಾರ್ ಪುತ್ರ ಪುನೀತ್ ಎಂದು ಗುರುತಿಸಲಾಗಿದೆ.
ಕೊಲೆಯಾದ ನಳಿನಿಯ ತಾಯಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರಿಗೆ ಪ್ರಕರಣದ ಭೀಕರ ಸತ್ಯ ಬಯಲಾಗಿದೆ. ವಿಚಾರಣೆ ವೇಳೆ ನಳಿನಿ ಸೇರಿದಂತೆ ಇಡೀ ಕುಟುಂಬವನ್ನೇ ಆರೋಪಿ ಶೇಖರ್ ಹತ್ಯೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ ಬೆಂಗಳೂರಿನಲ್ಲಿ ತೀವ್ರ ಆತಂಕ ಹಾಗೂ ಆಘಾತಕ್ಕೆ ಕಾರಣವಾಗಿದೆ.
