ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹ: ಸರ್ಕಾರಕ್ಕೆ ಹೋರಾಟ ಸಮಿತಿಯ ಎಚ್ಚರಿಕೆ

Spread the love

ವಿಜಯಪುರ: ಆಲಮಟ್ಟಿಗೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಭರವಸೆ ನೀಡಬೇಕು ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಒತ್ತಾಯಿಸಿದೆ.

ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯನ್ನು ಕೈಬಿಟ್ಟು, ಸಂಪೂರ್ಣವಾಗಿ ಸರ್ಕಾರವೇ ಕಾಲೇಜು ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಸಮಿತಿಯ ಸದಸ್ಯರು ಆಗ್ರಹಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ, “ಪಿಪಿಪಿ ಮಾದರಿಯು ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಸರ್ಕಾರವೇ ಸಂಪೂರ್ಣ ಹಣಕಾಸು ಜವಾಬ್ದಾರಿ ವಹಿಸಿಕೊಂಡು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸಬೇಕು” ಎಂದು ಹೇಳಿದರು. ಇನ್ನೊಬ್ಬ ಸದಸ್ಯ ಬಿ. ಭಗವಾನರೆಡ್ಡಿ ಮಾತನಾಡಿ, ಸೆಪ್ಟೆಂಬರ್ 9 ರಂದು ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಯಲ್ಲಿ ಎಲ್ಲಾ ಸಾಹಿತಿಗಳು, ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.

ಅಣ್ಣರಾಯ ಈಳಗೇರ ಮಾತನಾಡಿ, “ಯಾವುದೇ ಕಾರಣಕ್ಕೂ ವೈದ್ಯಕೀಯ ಕಾಲೇಜನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಶ್ರೀನಾಥ ಪೂಜಾರಿ ಮಾತನಾಡಿ, “ವೈದ್ಯಕೀಯ ಕಾಲೇಜು ಸ್ಥಾಪಿಸಲು 150ಕ್ಕೂ ಅಧಿಕ ಎಕರೆ ಜಾಗವಿರುವ ಏಕೈಕ ಜಿಲ್ಲೆ ವಿಜಯಪುರವಾಗಿದೆ. ಒಂದು ವೇಳೆ ಖಾಸಗಿಯವರಿಗೆ ಅವಕಾಶ ಕೊಟ್ಟರೆ ಜಿಲ್ಲಾ ಬಂದ್ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಕೆ.ಎಫ್. ಅಂಕಲಗಿ ಮಾತನಾಡಿ, ಈ ಹಿಂದೆ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಕಾಲದಲ್ಲೇ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಮ್ಮತಿ ದೊರಕಿತ್ತು ಎಂಬುದನ್ನು ನೆನಪಿಸಿದರು. ಅಕ್ರಮ ಮಾಶಾಳಕರ ಮಾತನಾಡಿ, ಆಲಮಟ್ಟಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡದಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಚಲನಾ ಸಮಿತಿ ಸದಸ್ಯರಾದ ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಸುರೇಶ ಜೆ.ಬಿ, ಸಿ.ಬಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *