ಕುಮಾರಸ್ವಾಮಿ ದೆಹಲಿ ನಿವಾಸದಲ್ಲೇ ಮೊಬೈಲ್ ಎಕ್ಸ್‌ಚೇಂಜ್? ಸ್ಟಿಂಗ್ ಆಪರೇಷನ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ!

Spread the love

ಬೆಂಗಳೂರು (ನ.01): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದೆ ಎನ್ನಲಾದ ವಿವಾದಾತ್ಮಕ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲೇ ಮೊಬೈಲ್ ಫೋನ್ ಎಕ್ಸ್‌ಚೇಂಜ್ ನಡೆದಿದೆ ಎಂಬುದಕ್ಕೆ ಪೂರಕವಾದ ದಾಖಲೆಗಳು ಲಭ್ಯವಾಗಿವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಬೆಂಗಳೂರು ಪೊಲೀಸರು, ಸ್ಟಿಂಗ್ ವೀಡಿಯೋ ಅಪ್‌ಲೋಡ್ ಮಾಡಲು ಬಳಸಲಾದ ಮೊಬೈಲ್ ಫೋನ್ ಕುರಿತು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಪ್ರಜ್ವಲ್ ಪ್ರಸಾದ್ ಖರೀದಿಸಿದ್ದ ಮೊಬೈಲ್ ಮೂಲಕವೇ ಸ್ಟಿಂಗ್ ವೀಡಿಯೋ ಅಪ್‌ಲೋಡ್ ಮಾಡಲಾಗಿದ್ದು, ರಿತೇಶ್ ಪಾಂಡೆ ಮೂಲಕ ಈ ಕಾರ್ಯ ನಡೆದಿದೆ. ಆದರೆ, ವೀಡಿಯೋ ಅಪ್‌ಲೋಡ್ ಮಾಡಲು ಸೂಚನೆ ನೀಡಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಮೊಬೈಲ್ ಎಕ್ಸ್‌ಚೇಂಜ್ ನಡೆದಿರುವುದಕ್ಕೆ ಪೂರಕವಾದ ಮಹತ್ವದ ದಾಖಲೆಗಳು ಪೊಲೀಸರಿಗೆ ದೊರೆತಿವೆ. ಅಲ್ಲದೆ, ಮೊಬೈಲ್ ಖರೀದಿಸಿದ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಸಂಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಪ್ರಜ್ವಲ್ ಪ್ರಸಾದ್, ವಿನೋದ್ ಶರ್ಮಾ ನಾಪತ್ತೆ

ಪ್ರಕರಣದ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ, ತನಿಖೆಯ ಪ್ರಮುಖ ಕೊಂಡಿಗಳೆಂದು ಹೇಳಲಾಗಿರುವ ಪ್ರಜ್ವಲ್ ಪ್ರಸಾದ್ ಹಾಗೂ ವಿನೋದ್ ಶರ್ಮಾ ನಾಪತ್ತೆಯಾಗಿದ್ದಾರೆ. ಇಬ್ಬರ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ಹುಡುಕಾಟ ನಡೆಸುತ್ತಿದೆ. ರಿತೇಶ್ ಪಾಂಡೆ ನೀಡಿರುವ ಹೇಳಿಕೆಯ ಆಧಾರದ ಮೇಲೆ ಪ್ರಕರಣದ ಪ್ರತಿಯೊಂದು ಅಂಶವನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ತನಿಖೆ ಬಳಿಕ ಸಂಪೂರ್ಣ ಸತ್ಯಾಂಶ ಬಹಿರಂಗ

ಪ್ರಸ್ತುತ ಪ್ರಕರಣದ ತನಿಖೆ ಸೂಕ್ಷ್ಮ ಹಂತದಲ್ಲಿದ್ದು, ಈಗಲೇ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾಪತ್ತೆಯಾಗಿರುವ ಪ್ರಜ್ವಲ್ ಪ್ರಸಾದ್ ಬಂಧನವಾದ ಬಳಿಕ ಈ ಇಡೀ ಪ್ರಕರಣದ ಹಿನ್ನೆಲೆ, ಅದರ ಹಿಂದಿರುವ ವ್ಯಕ್ತಿಗಳು ಹಾಗೂ ಪ್ರತಿಯೊಬ್ಬರ ಪಾತ್ರದ ಕುರಿತು ಸಂಪೂರ್ಣ ಮಾಹಿತಿ ಹೊರಬರಲಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *