ಚಾಮರಾಜನಗರ ದಸರಾ ಮಹೋತ್ಸವಕ್ಕೆ ಕಳೆ: ರೈತ ದಸರಾ, ಫಲಪುಷ್ಪ ಪ್ರದರ್ಶನ, ಶ್ವಾನ ಪ್ರದರ್ಶನ ಹಾಗೂ ಹೆಲಿ ರೈಡ್‌ಗೆ ಸಚಿವ ಸಿ. ಪುಟ್ಟರಂಗಶೆಟ್ಟಿ ಚಾಲನೆ

Spread the love

ಚಾಮರಾಜನಗರ: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮರಾಜನಗರದಲ್ಲಿಯೂ ಮೂರು ದಿನಗಳ ಕಾಲ ಆಯೋಜಿಸಿರುವ ಜಿಲ್ಲಾ ದಸರಾ ಉತ್ಸವದ ವಿವಿಧ ಕಾರ್ಯಕ್ರಮಗಳಿಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿರುವ ರೈತ ದಸರಾ, ಫಲಪುಷ್ಪ ಪ್ರದರ್ಶನ, ಶ್ವಾನ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ ಹಾಗೂ ಹೆಲಿ ರೈಡ್ ಕಾರ್ಯಕ್ರಮಗಳು ಜನರ ಗಮನ ಸೆಳೆದವು.

ಹೈನುಗಾರಿಕೆಗೆ ಉತ್ತೇಜನ ನೀಡಲು ರೈತ ದಸರಾ

ರೈತ ದಸರಾ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪಶುಪಾಲನಾ ಇಲಾಖೆ ಹಾಗೂ ಚಾಮರಾಜನಗರ ಹಾಲು ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆ ಮತ್ತು ಶ್ವಾನ ಪ್ರದರ್ಶನವನ್ನು ಸಚಿವ ಸಿ. ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಚಾಮರಾಜನಗರದಲ್ಲಿಯೂ ಮೂರು ದಿನಗಳ ಕಾಲ ಜಿಲ್ಲಾ ದಸರಾ ಉತ್ಸವವನ್ನು ಆಯೋಜಿಸಲಾಗಿದೆ. ನಾವೆಲ್ಲರೂ ರೈತರು, ರೈತರ ಮಕ್ಕಳು ಹಾಗೂ ಕೃಷಿಯನ್ನೇ ನಂಬಿ ಬದುಕುವವರು. ಚಾಮರಾಜನಗರ ಜಿಲ್ಲೆ ತನ್ನದೇ ಆದ ವಿಶಿಷ್ಟ ಮಣ್ಣಿನ ಗುಣಲಕ್ಷಣಗಳನ್ನು ಹೊಂದಿದೆ. ರೈತರನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.

ನಿಯತ್ತು ಮತ್ತು ಪ್ರಾಮಾಣಿಕತೆಗೆ ಶ್ವಾನಗಳು ಹೆಸರುವಾಸಿ

ಶ್ವಾನ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ನಿಯತ್ತು ಮತ್ತು ಪ್ರಾಮಾಣಿಕತೆಗೆ ಶ್ವಾನಗಳು ಹೆಸರುವಾಸಿಯಾಗಿವೆ. ಶ್ವಾನಗಳು ಅತ್ಯಂತ ಸೂಕ್ಷ್ಮ ಗ್ರಹಿಕೆ ಹೊಂದಿರುವ ಪ್ರಾಣಿಗಳಾಗಿದ್ದು, ಮನುಷ್ಯರಿಗೆ ಸುಲಭವಾಗಿ ತಿಳಿಯದ ಕೆಲವು ಸಂಗತಿಗಳನ್ನು ಅವು ಗುರುತಿಸಬಲ್ಲವು. ಹವಾಮಾನ ವೈಪರೀತ್ಯಗಳನ್ನೂ ಸೂಕ್ಷ್ಮವಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿವೆ ಎಂದರು.

ಶ್ವಾನಗಳನ್ನು ಸಾಕುವವರು ಅವುಗಳ ನಿರ್ವಹಣೆ ಬಗ್ಗೆ ಜಾಗರೂಕರಾಗಿರಬೇಕು. ಮಕ್ಕಳಿಗೆ ಶ್ವಾನಗಳಿಂದ ಯಾವುದೇ ಅಪಾಯವಾಗದಂತೆ ಎಚ್ಚರಿಕೆ ವಹಿಸಬೇಕು. ರೇಬಿಸ್ ಕಾಯಿಲೆಯ ನಿಯಂತ್ರಣದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು.

ದಸರಾ ಉತ್ಸವದಿಂದ ಕೃಷಿ ಮತ್ತು ಹೈನುಗಾರಿಕೆಗೆ ಪ್ರೋತ್ಸಾಹ: ಶಾಸಕ ಎಂ.ಆರ್. ಮಂಜುನಾಥ್

ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ನಾಡಹಬ್ಬ ದಸರಾ ಮೈಸೂರಿನ ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ಪ್ರತೀಕವಾಗಿದೆ. ಈ ಪರಂಪರೆಯನ್ನು ಚಾಮರಾಜನಗರದಲ್ಲಿಯೂ ಮುಂದುವರಿಸುವ ಮೂಲಕ ಈ ಬಾರಿ ಜಿಲ್ಲಾ ದಸರಾ ಉತ್ಸವವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಹಾಲು ಕರೆಯುವ ಸ್ಪರ್ಧೆ ಹಾಗೂ ಶ್ವಾನ ಪ್ರದರ್ಶನದ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ರೈತರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಜಿಲ್ಲೆಯ ವೈಶಿಷ್ಟ್ಯವನ್ನು ಪರಿಚಯಿಸಲು ಸಹಕಾರಿಯಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಶ್ವಾನದಳದಿಂದ ಅರಣ್ಯ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು. ಶ್ವಾನಗಳ ಪತ್ತೆ ಕಾರ್ಯದ ಸಾಮರ್ಥ್ಯವನ್ನು ಪ್ರದರ್ಶಿಸಿದ ಈ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು.

ಜಾನಪದ ಕಲಾತಂಡಗಳೊಂದಿಗೆ ಅಲಂಕೃತ ಎತ್ತಿನಗಾಡಿಗಳ ಮೆರವಣಿಗೆ

ರೈತ ದಸರಾ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಆಯೋಜಿಸಿದ್ದ ಅಲಂಕೃತ ಎತ್ತಿನಗಾಡಿಗಳ ಮೆರವಣಿಗೆಗೆ ಸಚಿವ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಮರಗಾಲು ಕುಣಿತ, ಚಂಡೆವಾದ್ಯ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಉತ್ಸವಕ್ಕೆ ಮೆರುಗು ನೀಡಿದವು.

ಬಳಿಕ ಜಿಲ್ಲಾಡಳಿತ ಭವನದ ಆವರಣಕ್ಕೆ ಆಗಮಿಸಿದ ಸಚಿವರು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಫಲಪುಷ್ಪ ಪ್ರದರ್ಶನದ ಅಂಗವಾಗಿ ಆವರಣದಲ್ಲಿ ನಿರ್ಮಿಸಲಾಗಿದ್ದ ಚಾಮುಂಡಿ ತಾಯಿಯ ಮಣ್ಣಿನ ಕಲಾಕೃತಿಯನ್ನು ವೀಕ್ಷಿಸಿದರು. ನಂತರ ಜಿಲ್ಲಾಡಳಿತ ಭವನದ ಪ್ರವೇಶದ್ವಾರದ ಒಳಾವರಣದಲ್ಲಿ ರಾಶಿಪೂಜೆ ನೆರವೇರಿಸುವ ಮೂಲಕ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಚಾಮರಾಜನಗರದಲ್ಲಿ ಮೊದಲ ಬಾರಿಗೆ ಹೆಲಿ ರೈಡ್

ದಸರಾ ಮಹೋತ್ಸವದ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಹೆಲಿ ರೈಡ್ ಕಾರ್ಯಕ್ರಮವೂ ವಿಶೇಷ ಆಕರ್ಷಣೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಸ್ವತಃ ಹೆಲಿ ರೈಡ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಹೆಲಿ ಟೂರಿಸಂಗೆ ಪ್ರೋತ್ಸಾಹ ನೀಡಿದರು. ಸಚಿವರೊಂದಿಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಕೂಡ ಹೆಲಿ ರೈಡ್‌ನಲ್ಲಿ ಭಾಗವಹಿಸಿ ಜಿಲ್ಲೆಯ ವಿವಿಧ ಪ್ರದೇಶಗಳನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಚ್.ಎಂ. ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *