‘ಪ್ರಬಲ’ದ ಪ್ರೇರಣೆ, ಬದಲಾವಣೆಯ ಬೆಳಕು: ಹನೂರಿನಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಜಾಥಾ

Spread the love

ಹನೂರು: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆಎಚ್‌ಪಿಟಿ) ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ‘ಪ್ರಬಲ’ ಕಾರ್ಯಕ್ರಮದಡಿ ಪಟ್ಟಣದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಜಾಥಾ ಹಾಗೂ ಕಿರು ನಾಟಕವನ್ನು ಆಯೋಜಿಸಲಾಗಿತ್ತು.

ಬೆಳಿಗ್ಗೆ 9.30ಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡ ಜಾಗೃತಿ ಜಾಥಾವು ಹನೂರಿನ ಮುಖ್ಯ ವೃತ್ತದ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಸಾಗಿತು. ಜಾಥಾದ ಮೂಲಕ ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯದ ಮಹತ್ವ ಹಾಗೂ ಮಾನಸಿಕ ಯೋಗಕ್ಷೇಮದ ಅಗತ್ಯದ ಕುರಿತು ಅರಿವು ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಮಹತ್ವ ಸಾರುವ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಸಾರ್ವಜನಿಕರು ನಾಟಕವನ್ನು ಆಸಕ್ತಿಯಿಂದ ವೀಕ್ಷಿಸುವುದರ ಜೊತೆಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶಿವಕುಮಾರ್ ಅವರು ಮಕ್ಕಳಿಗೆ ಡಿಜಿಟಲ್ ಭದ್ರತೆ, ಶಿಕ್ಷಣದ ಮಹತ್ವ ಹಾಗೂ ಮಾನಸಿಕ ಆರೋಗ್ಯದ ಕುರಿತು ಮಾಹಿತಿ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಅವರು ಮಾನಸಿಕ ಆರೋಗ್ಯದ ಕಾಳಜಿಯ ಜೊತೆಗೆ ದೈಹಿಕ ವ್ಯಾಯಾಮ ಮತ್ತು ಪೌಷ್ಟಿಕ ಆಹಾರದ ಮಹತ್ವವನ್ನು ವಿವರಿಸಿದರು. ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕಾರ್ಯಕ್ರಮಕ್ಕೆ ಭೇಟಿ ನೀಡಿ ಸಹಕಾರ ನೀಡಿದರು.

‘ಪ್ರಬಲ’ ಕಾರ್ಯಕ್ರಮವು ಕಿಶೋರಿಯರ ಸಬಲೀಕರಣ, ನಾಯಕತ್ವ ವಿಕಸನ, ಆರೋಗ್ಯ ಮತ್ತು ಹಕ್ಕುಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಸ್ಥಳೀಯ ಆಡಳಿತದಲ್ಲಿ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಿಶೋರಿಯರ ಉಪಸಮಿತಿಗಳನ್ನು ರಚಿಸುವ ಮೂಲಕ ಅವರು ತಮ್ಮ ಸಮಸ್ಯೆಗಳು, ಅಗತ್ಯಗಳು ಹಾಗೂ ಹಕ್ಕುಗಳ ಕುರಿತು ಧ್ವನಿ ಎತ್ತಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮೂಲಕ ಕಿಶೋರಿಯರಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನ ಮಾಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಪ್ರಬಲ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಡಾ. ನಾಗನಂದನ್, ತಾಲ್ಲೂಕು ಸಂಯೋಜಕರಾದ ತೇಜಸ್ವಿನಿ ಮತ್ತು ಮಮತಾ, ಸಮುದಾಯ ಸುಗಮಕಾರರಾದ ವೃಷಭೇಂದ್ರ, ಸಂತೋಷ್, ಮಧು, ಅಶ್ವಿನಿ, ಶೆಂಬಗವಲ್ಲಿ, ಕೌಶಲ್ಯ ಹಾಗೂ ಮಹದೇವಮ್ಮ ಸೇರಿದಂತೆ ಪೊಲೀಸ್, ಆರೋಗ್ಯ ಮತ್ತು ಪಂಚಾಯತ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *