
ಹನೂರು: ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ನಿಕಟಪೂರ್ವ ಕಾರ್ಯದರ್ಶಿ ಎ.ಇ. ರಘು ಅವರು ನೂತನ ಕಾರ್ಯದರ್ಶಿ ಪುರುಷೋತ್ತಮ್ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಮೈಸೂರು ರಾಜಮನೆತನದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಸೇರಿದಂತೆ ವಿವಿಧ ದಾನಿಗಳು ಶ್ರೀ ಮಲೆ ಮಾದಪ್ಪನಿಗೆ ಅರ್ಪಿಸಿದ್ದ ಅಪಾರ ಮೌಲ್ಯದ ಆಭರಣಗಳು ಹಸ್ತಾಂತರಿಸಲಾದ ಸಾಮಗ್ರಿಗಳಲ್ಲಿ ಸೇರಿವೆ. ಮಹಾರಾಜರು ನೀಡಿದ್ದ ಬಂಗಾರದ ಗಂಡಭೇರುಂಡ ಪದಕ, ಸಂಸ್ಕೃತ ಅಕ್ಷರಗಳಿರುವ ಮತ್ತೊಂದು ಗಂಡಭೇರುಂಡ ಪದಕ, ಬಂಗಾರದ ಸರ ಹಾಗೂ ಜೋಡಿ ಸರ ಸೇರಿದಂತೆ ಪ್ರಮುಖ ಚಿನ್ನಾಭರಣಗಳನ್ನು ಹಸ್ತಾಂತರಿಸಲಾಯಿತು.
ಇದರೊಂದಿಗೆ ಸ್ವಾಮಿಯ ಕೊಳಗದ ಹಣೆಯ ಮೇಲಿರುವ ಮೂರು ಸಾಲಿನ ವಿಭೂತಿ ಪಟ್ಟಿಯಲ್ಲಿನ 176 ವಜ್ರಗಳು, 21 ಮಾಣಿಕ್ಯಗಳು, ದೊಡ್ಡ ಮುತ್ತಿನ ಪದಕ, ರತ್ನಖಚಿತ ದೊಡ್ಡ ಮತ್ತು ಚಿಕ್ಕ ಕಿರೀಟಗಳು, ಎರಡು ಬಂಗಾರದ ಕರ್ಣಜ್ವಾಲೆಗಳು, ಎರಡು ಕಣ್ಣಿಗಳು, ಬಂಗಾರದ ಮೀಸೆ, ಎರಡು ಬಂಗಾರದ ಹಸ್ತಗಳು ಹಾಗೂ ಬಂಗಾರದ ವೀರಭದ್ರಸ್ವಾಮಿ ಮುದ್ರಿಕೆಯನ್ನು ಹಸ್ತಾಂತರಿಸಲಾಯಿತು.
ಅಲ್ಲದೆ, ಶೇಷಣ್ಣ ಒಡೆಯರ ಬಂಗಾರದ ಕಿರೀಟ, ಬಂಗಾರದ ಮುಕ್ಕಣ್ಣ-ಬೊಟ್ಟು, ವಜ್ರಖಚಿತ ಕೋರಂಬಾ, ಬೆಳ್ಳಿ ಪೀಠದ ಮೇಲಿನ ಬಂಗಾರದ ಬಸವ, ಬೆಳ್ಳಿ ಸರ ಮತ್ತು ಕೊಂಡಿ ಸೇರಿದಂತೆ ವಿವಿಧ ಬೆಳ್ಳಿ ಸಾಮಗ್ರಿಗಳನ್ನು ನೂತನ ಕಾರ್ಯದರ್ಶಿಗೆ ವಹಿಸಲಾಯಿತು.
ದೇವಾಲಯದ ಚಿನ್ನಾಭರಣ ಮತ್ತು ಬೆಳ್ಳಿ ಸಾಮಗ್ರಿಗಳ ಹಸ್ತಾಂತರದ ಜೊತೆಗೆ ಸ್ಟ್ರಾಂಗ್ ರೂಂನ ಬೀಗದ ಕೀಲಿಕೈಯನ್ನೂ ಹಸ್ತಾಂತರಿಸುವ ಮೂಲಕ ಪ್ರಾಧಿಕಾರದ ಎಲ್ಲ ಜವಾಬ್ದಾರಿಗಳನ್ನು ನೂತನ ಕಾರ್ಯದರ್ಶಿ ಪುರುಷೋತ್ತಮ್ ಅವರಿಗೆ ವಹಿಸಲಾಯಿತು. ಈ ಮೂಲಕ ನಿಕಟಪೂರ್ವ ಕಾರ್ಯದರ್ಶಿ ಎ.ಇ. ರಘು ಅವರು ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಪತ್ರ ಸಲಹೆಗಾರ ಮಹದೇವ್, ಸಿಬ್ಬಂದಿಗಳಾದ ಸರಗೂರು ಮಹದೇವಸ್ವಾಮಿ ಮತ್ತು ಮಲ್ಲಿಕಾರ್ಜುನ್, ಪಾರುಪತ್ತೆದಾರ ಮಹಾಲಿಂಗನಕಟ್ಟೆ ಮಹದೇವಸ್ವಾಮಿ, ಜನಾರ್ದನ್ ಹಾಗೂ ಪ್ರಧಾನ ಅರ್ಚಕ ಕೆ.ವಿ. ಮಾದೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

