ಬರಪೀಡಿತ ರೈತರಿಗೆ ₹2,500 ಇನ್‌ಪುಟ್ ಸಬ್ಸಿಡಿ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ

Spread the love

ಬೆಂಗಳೂರು: ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣದ ನೆರವು ಒದಗಿಸುವ ಉದ್ದೇಶದಿಂದ ಎನ್‌ಡಿಆರ್‌ಎಫ್‌ (NDRF) ಅನುದಾನವನ್ನು ನಿರೀಕ್ಷಿಸದೆ ರಾಜ್ಯ ಸರ್ಕಾರದಿಂದಲೇ ಪ್ರತಿ ರೈತನಿಗೆ ₹2,500 ಇನ್‌ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ರಾಜ್ಯದ ಸುಮಾರು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದ್ದು, ಮೊದಲ ಹಂತದಲ್ಲಿಯೇ ಸುಮಾರು ₹1,250 ಕೋಟಿ ಮೊತ್ತವನ್ನು ರೈತರಿಗೆ ನೀಡಲಾಗುವುದು. ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಅವರ ನೆರವಿಗೆ ನಿಲ್ಲಬೇಕಿದ್ದು, ಇತರ ಎಲ್ಲ ರೀತಿಯಲ್ಲಿಯೂ ರೈತರಿಗೆ ಸಹಾಯಹಸ್ತ ನೀಡಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕ ಮಾತ್ರವಲ್ಲದೆ ದೇಶದ ಸುಮಾರು 17ರಿಂದ 18 ರಾಜ್ಯಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ರಾಜ್ಯದ ನೆರವಿಗೆ ಕೇಂದ್ರ ಸರ್ಕಾರ ತಕ್ಷಣ ಧಾವಿಸಬೇಕು. ಕೇಂದ್ರ ಸರ್ಕಾರದ ತಂಡವನ್ನು ಕೂಡಲೇ ರಾಜ್ಯಕ್ಕೆ ಕಳುಹಿಸಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಪ್ರಧಾನಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಡಾ. ಜಿ ಪರಮೇಶ್ವರ ತಿಳಿಸಿದರು.

ಪ್ರಸ್ತುತ 100ರಿಂದ 101 ತಾಲೂಕುಗಳಿಗೆ ಸಂಬಂಧಿಸಿದಂತೆ ಸುಮಾರು ₹18,000 ಕೋಟಿ ನಷ್ಟದ ಅಂದಾಜು ಮಾಡಲಾಗಿದ್ದು, ₹3,800 ಕೋಟಿ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇನ್ನೂ ಸುಮಾರು 120 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವ ಸಾಧ್ಯತೆ ಇದ್ದು, ಅವುಗಳನ್ನು ಒಳಗೊಂಡಂತೆ ಮತ್ತೊಂದು ಮೆಮೊರಾಂಡಮ್ ಸಲ್ಲಿಸಲಾಗುವುದು. ಎಲ್ಲವನ್ನೂ ಒಟ್ಟುಗೂಡಿಸಿದರೆ ಒಟ್ಟು ನಷ್ಟ ಸುಮಾರು ₹40,000 ಕೋಟಿಯಷ್ಟಾಗುವ ಸಾಧ್ಯತೆ ಇದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ವಯ ರಾಜ್ಯಕ್ಕೆ ಎಷ್ಟು ಪರಿಹಾರ ದೊರೆಯಬೇಕೆಂಬುದನ್ನು ಲೆಕ್ಕ ಹಾಕಿ, ಅಗತ್ಯ ಮೊತ್ತವನ್ನು ಕೇಂದ್ರ ಸರ್ಕಾರದಿಂದ ಕೇಳಲಾಗುವುದು ಎಂದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಜ್ಯದ ರೈತರಿಗೆ ದೊರೆತ ಬೆಳೆ ವಿಮೆ ಪರಿಹಾರದ ಪ್ರಮಾಣವೂ ಹೆಚ್ಚಾಗಿದೆ. 2020-21ರಲ್ಲಿ ₹700 ಕೋಟಿ, 2021-22ರಲ್ಲಿ ₹881 ಕೋಟಿ, 2022-23ರಲ್ಲಿ ಸುಮಾರು ₹1,090ರಿಂದ ₹1,092 ಕೋಟಿ ಹಾಗೂ 2023-24ರಲ್ಲಿ ₹1,600 ಕೋಟಿ ಬೆಳೆ ವಿಮೆ ಪರಿಹಾರ ದೊರೆತಿದೆ. 2023-24ರಲ್ಲಿ ₹1,600 ಕೋಟಿ ಈಗಾಗಲೇ ರೈತರಿಗೆ ವಿತರಿಸಲಾಗಿದ್ದು, ಇದು ದಾಖಲೆಯ ಪ್ರಮಾಣವಾಗಿದೆ ಎಂದು ಅವರು ಹೇಳಿದರು.

ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಪ್ರದೇಶಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ವಶಕ್ಕೆ ಪಡೆದು, ಮಾಲೀಕರಿಗೆ ಬಾಡಿಗೆ ಪಾವತಿಸಿ ನೀರು ಪೂರೈಸುವಂತೆ ಸೂಚಿಸಲಾಗಿದೆ. ಅಗತ್ಯವಿರುವ ಕಡೆ ಟ್ಯಾಂಕರ್‌ಗಳ ಮೂಲಕವೂ ನೀರು ಸರಬರಾಜು ಮಾಡಲಾಗುತ್ತಿದೆ. ಮೇವಿನ ಕೊರತೆ ಎದುರಾದಾಗ ಮೇವಿನ ಕಿಟ್‌ಗಳನ್ನು ವಿತರಿಸಿ ಮೇವು ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದ್ದು, ಜಾನುವಾರುಗಳ ರಕ್ಷಣೆಗಾಗಿ ಗೋಶಾಲೆಗಳನ್ನೂ ತೆರೆಯಲಾಗಿದೆ ಎಂದು ಡಾ. ಪರಮೇಶ್ವರ ತಿಳಿಸಿದರು.

ರೈತರ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮೊರಟೋರಿಯಂ ಅವಧಿಯನ್ನು 12 ತಿಂಗಳಿಗೆ ಹಾಗೂ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಂದ 60 ತಿಂಗಳವರೆಗೆ ವಿಸ್ತರಿಸಲಾಗಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ರೈತರಿಗೆ ಕಿರುಕುಳ ಅಥವಾ ತೊಂದರೆ ನೀಡಿದರೆ, ಈಗಾಗಲೇ ಜಾರಿಯಲ್ಲಿರುವ ಕಠಿಣ ಕಾನೂನುಗಳ ಅನ್ವಯ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಬರಗಾಲದ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರು, ಬಡವರು ಹಾಗೂ ಗ್ರಾಮೀಣ ಜನರೊಂದಿಗೆ ಭದ್ರವಾಗಿ ನಿಂತಿದ್ದು, ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

Leave a Reply

Your email address will not be published. Required fields are marked *