ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೂಲ ಸಿದ್ಧಾಂತದ ರೈತ ಸಂಘದ ಜಿಲ್ಲಾಧ್ಯಕ್ಷ ಗೌಡೇಗೌಡ, ರೈತರಿಗೆ ಸರ್ಕಾರದಿಂದ ದೊರೆಯಬೇಕಾದ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ರೈತರು ಸಂಘಟಿತರಾದಾಗ ಮಾತ್ರ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಅರಣ್ಯ ಅಂಚಿನ ರೈತರಿಗೆ ಕಾಡುಪ್ರಾಣಿಗಳಿಂದ ಬೆಳೆ ನಷ್ಟ, ಪಹಣಿ ಸಮಸ್ಯೆ, ಬೆಂಬಲ ಬೆಲೆ, ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಸಮಸ್ಯೆಗಳಿವೆ. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘ ಸದಾ ರೈತರ ಪರವಾಗಿ ಹೋರಾಟ ನಡೆಸಲಿದೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ರಾಜಣ್ಣ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಜತೆಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸಹಕರಿಸಬೇಕು. ರೈತ ವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದರು.
ನೂತನವಾಗಿ ಗ್ರಾಮ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ತಿರುಮಲೈ ಮಾತನಾಡಿ, ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಮತ್ತು ಗ್ರಾಮಸ್ಥರಿಗೆ ಧನ್ಯವಾದ ಸಲ್ಲಿಸಿದರು. ಗ್ರಾಮದ ಎಲ್ಲ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾಗಿ ನಾಗರಾಜು, ಅಧ್ಯಕ್ಷರಾಗಿ ತಿರುಮಲೈ, ಉಪಾಧ್ಯಕ್ಷರಾಗಿ ಮಾದಪ್ಪ, ಕಾರ್ಯದರ್ಶಿಯಾಗಿ ಜಯವಿಜಯನ್, ಖಜಾಂಚಿಯಾಗಿ ಬೈರಾಲಿಂಗಂ, ಹಸಿರು ಸೇನೆ ಅಧ್ಯಕ್ಷರಾಗಿ ಶ್ರೀನಿವಾಸ್ ಹಾಗೂ ಮಹಿಳಾ ಅಧ್ಯಕ್ಷರಾಗಿ ಅಲಮೇಲು ಆಯ್ಕೆಯಾದರು. ಇದೇ ವೇಳೆ 20ಕ್ಕೂ ಹೆಚ್ಚು ರೈತರು ಸಂಘಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ರಾಜಮಣಿ, ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಗೌಡ, ಚಾಮರಾಜನಗರ ತಾಲೂಕು ಅಧ್ಯಕ್ಷ ಸಂತೋಷ್, ಆಲೂರು-ಗುಂಡ್ಲುಪೇಟೆ ಅಧ್ಯಕ್ಷ ದಿಲೀಪ್, ಪ್ರಧಾನ ಕಾರ್ಯದರ್ಶಿ ಬೊಮ್ಮನಹಳ್ಳಿ ಲೋಕೇಶ್, ಕೊಳ್ಳೇಗಾಲ ತಾಲೂಕು ಗೌರವಾಧ್ಯಕ್ಷ ಮಸಣಶೆಟ್ಟಿ, ಅಧ್ಯಕ್ಷ ನಟೇಶ್, ತಾಲೂಕು ಮಹಿಳಾ ಅಧ್ಯಕ್ಷೆ ಮುಟ್ಟುಲಕ್ಷ್ಮಿ, ಹಸಿರು ಸೇನೆ ತಾಲೂಕು ಅಧ್ಯಕ್ಷ ಪ್ರದೀಪ್ ಕುಮಾರ್, ಅಜ್ಜೀಪುರ ಘಟಕದ ಅಧ್ಯಕ್ಷ ನಾಗರಾಜು, ವಾರದರಾಜು ಸೇರಿದಂತೆ ವಿವಿಧ ಗ್ರಾಮಗಳ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ :ಕಾರ್ತಿಕ್ ಗೌಡ ಹನೂರು.


