ಬಸಪ್ಪನದೊಡ್ಡಿಯಲ್ಲಿ ರೈತನ ಮೇಲೆ ಬರಸಿಡಿಲು: ಚಿರತೆ ದಾಳಿಗೆ 4 ಮೇಕೆ ಬಲಿ

Spread the love

ವರದಿ: ಕಾರ್ತಿಕ್ ಗೌಡ ಗೌಡ ಹನೂರು.

ಹನೂರು, ಸೆ.23: ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆಯೊಂದು ದಾಳಿ ನಡೆಸಿ ಬಡ ರೈತ ಕುಟುಂಬಕ್ಕೆ ಭಾರಿ ನಷ್ಟ ಉಂಟುಮಾಡಿದೆ. ಗ್ರಾಮದ ಶಿವಮ್ಮ ಕೋಂ. ಚೆನ್ನೇಗೌಡ ಅವರು ಸಾಕಿದ್ದ ನಾಲ್ಕು ಮೇಕೆಗಳನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.

 

ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಶಿವಮ್ಮ ಅವರಿಗೆ ಮೇಕೆಗಳೇ ಕುಟುಂಬದ ಆದಾಯಕ್ಕೆ ಆಸರೆಯಾಗಿದ್ದವು. ಕೂಲಿ ಮಾಡಿ, ಸಾಲ ಮಾಡಿ ಸಾಕಿದ್ದ ಮೇಕೆಗಳು ಕಣ್ಣೆದುರೇ ಚಿರತೆ ದಾಳಿಗೆ ಬಲಿಯಾಗಿರುವುದು ಕುಟುಂಬಕ್ಕೆ ಆಘಾತ ಉಂಟುಮಾಡಿದ್ದು, ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ.

 

ಮಂಗಳವಾರ ಬೆಳಗಿನ ಜಾವ ಮೇಕೆಗಳ ಆರ್ತನಾದ ಕೇಳಿ ಹೊರಬಂದು ನೋಡುವಷ್ಟರಲ್ಲಿ ಚಿರತೆ ದಾಳಿ ನಡೆಸಿ ನಾಲ್ಕು ಮೇಕೆಗಳನ್ನು ಕೊಂದು ಹಾಕಿತ್ತು ಎನ್ನಲಾಗಿದೆ. ಮೇಕೆಗಳನ್ನು ಕಳೆದುಕೊಂಡಿರುವುದರಿಂದ ರೈತ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ.

 

ವಿಷಯ ತಿಳಿದು ಸ್ಥಳಕ್ಕೆ ಡಿಆರ್‌ಎಫ್‌ಒ ನಂದೀಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪಂಚನಾಮೆ ಕೈಗೊಂಡಿದ್ದಾರೆ.

 

ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿರುವುದರಿಂದ ಕುರಿ, ಮೇಕೆ ಸಾಕುವ ರೈತರು ಆತಂಕದಲ್ಲಿದ್ದಾರೆ. ಕೂಡಲೇ ಚಿರತೆ ಸೆರೆಗೆ ಬೋನ್ ಅಳವಡಿಸಿ, ಚಿರತೆ ಹಾವಳಿಗೆ ತುತ್ತಾದ ಬಡ ರೈತ ಕುಟುಂಬಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *