
ಹನೂರು ಪಟ್ಟಣದ ಹೃದಯ ಭಾಗದಲ್ಲಿರುವ ಆರೋಗ್ಯ ಮಾತೆಯ ದೇವಾಲಯ ಸುಮಾರು ಐದು ದಶಕಗಳಿಂತಲೂ ಹೆಚ್ಚು
ಈ ಭಾಗದಲ್ಲಿರುವ ಭಕ್ತರ ಪಾಲಿಗೆ ಆಶಾಕಿರಣವಾಗಿದೆ.
ಇಡೀ ವಿಶ್ವದೆಲ್ಲೆಡೆ ಸೆಪ್ಟೆಂಬರ್ 8 ರಂದು ಮಾತೆ ಮರಿಯಮ್ಮನವರ ಜನ್ಮ ದಿನವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ.
ಹನೂರಿನಲ್ಲಿ ಸೆಪ್ಟೆಂಬರ್ ತಿಂಗಳ ಎರಡನೆಯ ಭಾನುವಾರ ಇಲ್ಲವೇ ಮೂರನೆಯ ಭಾನುವಾರ ಆಚರಿಸುವುದು ಪ್ರತೀತಿ. ಜಗದ್ರಕ್ಷಕರಾದ ಯೇಸುವಿನ ತಾಯಿಯ ಹಬ್ಬವಾದ್ದರಿಂದ ಎಲ್ಲೆಡೆಯಲ್ಲಿಯೂ ಈ ಹಬ್ಬಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಹಾಗೂ ದೂರದ ಊರೂರುಗಳಿಂದ
ಶ್ರದ್ಧಾ ಭಕ್ತಿಯಿಂದ ಭಕ್ತರು ಆಗಮಿಸುತ್ತಾರೆ.
ಇನ್ನೆ 20.09.2026 ರಂದು ಭಾನುವಾರ ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವವನ್ನು
ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.
ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾಕ್ಟರ್ ಫ್ರಾನ್ಸಿಸ್ ಸೆರಾವೋ ಎಸ್.ಜೆ ರವರು ಹಬ್ಬದ ಆಡಂಬರ ಗಾಯನ ಬಲಿಪೂಜೆಯನ್ನು ನೆರವೇರಿಸಿದರು.
ಕೊಳ್ಳೇಗಾಲ ವಲಯದ ಶ್ರೇಷ್ಠ ಗುರು ವಂದನೀಯ ರಾಯಪ್ಪ.ಎಂ ರವರು, ಮಾರ್ಟಳ್ಳಿ ವಲಯದ ಶ್ರೇಷ್ಠ ಗುರುಗಳಾದ ವಂದನೀಯ ಗುರು ಡಾಕ್ಟರ್ ಎಂ. ವಿನ್ಸೆಂಟ್ ರವರು ಸೇರಿದಂತೆ ಸುಮಾರು 25 ಕ್ಕಿಂತ ಹೆಚ್ಚು ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದರು. ಸುಮಾರು 2000 ಕ್ಕಿಂತಲೂ ಹೆಚ್ಚು ಮಾತೆ ಮರಿಯಮ್ಮನವರ ಭಕ್ತಾದಿಗಳು ಭಾಗವಹಿಸಿದರು.
ಮಾತೆ ಮರಿಯಮ್ಮನವರು ವಿದೇಶಗಳಲ್ಲಿ ಲೂರ್ದ್ ನಗರ, ಫಾತಿಮ ನಗರಗಳಲ್ಲಿ ತನ್ನ ಭಕ್ತರಿಗೆ ದರ್ಶನವಿಟ್ಟು ತನ್ನ ಮಹಿಮೆಯನ್ನು ಜಗತ್ತಿಗೆ ತೋರ್ಪಡಿಸಿದರು.
ಭಾರತದಲ್ಲಿ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ತಮಿಳುನಾಡಿನ ವೇಳಾಂಗಣಿ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹರಿಹರದಲ್ಲಿ ತನ್ನ ಭಕ್ತರಿಗೆ ದರ್ಶನ ನೀಡಿದರು.
ದೂರದ ವೇಳಾಂಗಣಿ, ಹರಿಹರ, ಬೆಂಗಳೂರಿನ ಶಿವಾಜಿ ನಗರಕ್ಕೆ ಹೋಗಲು ಸಾಧ್ಯವಾಗದ ಶ್ರೀ ಸಾಮಾನ್ಯರು, ಬಡವರು, ನಿರ್ಗತಿಕರು ಬಡವರ ವೇಳಾಂಗಣಿ ಎಂದು ಪ್ರಖ್ಯಾತಿಯನ್ನು ಪಡೆದಿರುವ ಹನೂರಿನ ಆರೋಗ್ಯ ಮಾತೆಯ ಪುಣ್ಯಕ್ಷೇತ್ರಕ್ಕೆ ಪ್ರತಿ ವರ್ಷವೂ ಭಕ್ತಾದಿಗಳು ಆಗಮಿಸಿ ತಮ್ಮ ಇಷ್ಟಾರ್ಥಗಳು ಸಿದ್ಧಿಸುವಂತೆ ಕೋರಿಕೊಳ್ಳುತ್ತಾರೆ.
ಹಲವರಿಗೆ ರೋಗಸೌಖ್ಯ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಶಾಂತಿ ಸಮಾಧಾನ, ಉದ್ಯೋಗದಲ್ಲಿ ಬೆಳವಣಿಗೆಯನ್ನು ಕಂಡು ಹರಕೆಗಳನ್ನು ನೆರವೇರಿಸುತ್ತಾರೆ.
ಸಂಜೆ ವಿಶೇಷವಾಗಿ ಅಲಂಕೃತವಾದ ಭವ್ಯ ತೇರಿನ ಮೆರವಣಿಗೆಯು ಹನೂರಿನ ಮುಖ್ಯ ಬೀದಿಗಳಲ್ಲಿ ಹಾದು ಹೋಗುತ್ತದೆ. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಸಾಗುವ ಭಕ್ತಾದಿಗಳು ಪ್ರಾರ್ಥನೆ ಹಾಗೂ ಸ್ತುತಿಗೀತೆಗಳ ಮೂಲಕ ಮಾತೆಗೆ ನಮನಗಳನ್ನು ಸಲ್ಲಿಸುತ್ತಾರೆ. ಸರ್ವಧರ್ಮಗಳ ಜನರು ಮಾತೆಗೆ ನಮನ ಸಲ್ಲಿಸಿದರು. ಹನೂರಿನ ವಂದನೀಯ ಗುರು ಸಂಜಯ್ ಕುಮಾರ್.ಎಫ್ ರವರು ರಚಿಸಿದ ನೂತನ ಆಧ್ಯಾತ್ಮಿಕ ಕೃತಿಗಳಾದ ಸಂಜೆ ಸಂದೇಶ ಭಾಗ -2 ಹಾಗೂ ಸ್ತುತಿ ಸಂಭ್ರಮ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಅಂತಿಮವಾಗಿ ಮಾತೆ ಮರಿಯಮ್ಮನವರ ಪ್ರಸಾದವನ್ನು ಭಕ್ತಾದಿಗಳಿಗೆ ಹಂಚಲಾಯಿತು. ಧರ್ಮಕೇಂದ್ರದ ಗುರುಗಳಾದ ವಂದನೀಯ ಗುರು ಸಂಜಯ್ ಕುಮಾರ್ ರವರ ಕ್ರಿಯಾಶೀಲ ಸಂಗೀತ ನಿರ್ದೇಶನ ಮತ್ತು ಮಾರ್ಗದರ್ಶನದೊಂದಿಗೆ ರಚಿಸಿದ ಸ್ತುತಿ ಸಂಭ್ರಮ ಗಾಯನ ವೃಂದದ ಸುಮಧುರ ಗಾಯನ ಭಕ್ತರನ್ನು ದೇವರೆಡೆಗೆ ಕೊಂಡೊಯ್ಯಿತು. ವಂದನೀಯ ಗುರುಗಳು ಯಶಸ್ವಿಯಾಗಿ ಆಯೋಜನೆ ಮಾಡಿ ಸರ್ವರನ್ನು ಒಗ್ಗೂಡಿಸಿ ಒಂದೇ ಕುಟುಂಬದವರನ್ನಾಗಿಸಿ ಎಲ್ಲಾ ದೈವೀ ಕಾರ್ಯಗಳು ಸುಸೂತ್ರವಾಗಿ ಜರುಗಲು ಶ್ರಮಿಸಿದರು.

