ಅಬಕಾರಿ ಇಲಾಖೆಗೆ ನಿರೀಕ್ಷೆಗೂ ಮೀರಿ ಆದಾಯ: ಸಚಿವ ಆರ್.ಬಿ. ತಿಮ್ಮಾಪೂರ

Spread the love

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಈ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ ನಿರೀಕ್ಷೆಗೂ ಮೀರಿ ಆದಾಯ ಸಂಗ್ರಹವಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ₹16,290 ಕೋಟಿ ಆದಾಯ ನಿರೀಕ್ಷಿಸಲಾಗಿತ್ತು. ಆದರೆ, ₹16,358 ಕೋಟಿ ಆದಾಯ ಸಂಗ್ರಹವಾಗಿದ್ದು, ಇದು ನಿರೀಕ್ಷೆಗಿಂತ ₹68.78 ಕೋಟಿ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

ಭ್ರಷ್ಟಾಚಾರಕ್ಕೆ ಕಡಿವಾಣ
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತೆರಿಗೆ ಸಂಗ್ರಹ ಇಲಾಖೆಯಲ್ಲಿ ಮೊದಲ ಬಾರಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದ್ದು, ಆನ್‌ಲೈನ್ ಮೂಲಕ ಪರವಾನಗಿ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿಎಲ್ 7 ಲೈಸೆನ್ಸ್ ನೀಡುವ ಹಂತಗಳನ್ನು ಕೂಡ ಕಡಿತಗೊಳಿಸಲಾಗಿದೆ ಎಂದು ಸಚಿವರು ಹೇಳಿದರು. ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿದ್ದು, ಎ ವೃಂದದ 31, ಬಿ ವೃಂದದ 20 ಹಾಗೂ 43 ಅಬಕಾರಿ ಸಬ್ ಇನ್ಸ್‌ಪೆಕ್ಟರ್‌ಗಳ ಮೇಲೆ ಶಿಸ್ತು ಕ್ರಮ ಜಾರಿಯಲ್ಲಿದೆ ಎಂದು ತಿಳಿಸಿದರು.

ಮದ್ಯ, ಡ್ರಗ್ಸ್ ಸಾಗಣೆ ನಿಯಂತ್ರಣಕ್ಕೆ ಸೂಚನೆ
ಮಹಾರಾಷ್ಟ್ರ ಮತ್ತು ಗೋವಾದಂತಹ ರಾಜ್ಯಗಳಿಂದ ಅಕ್ರಮ ಮದ್ಯ ಸಾಗಣೆಯ ಮೇಲೆ ತೀವ್ರ ನಿಗಾ ಇಡುವಂತೆ ಸಚಿವರು ಸೂಚನೆ ನೀಡಿದರು. ಗಡಿ ಚೆಕ್‌ಪೋಸ್ಟ್‌ಗಳಲ್ಲಿನ ಸಿಬ್ಬಂದಿಯನ್ನು 15 ದಿನಗಳಿಗೊಮ್ಮೆ ಬದಲಾಯಿಸಲು ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಸಿಹೆಚ್ ಪೌಡರ್ ಮತ್ತು ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಯುವಕರ ಭವಿಷ್ಯದ ದೃಷ್ಟಿಯಿಂದ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಎನ್‌ಡಿಪಿಎಸ್ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತು ನೀಡಿದರು.

ಸುಧಾರಣಾ ಆಯೋಗದ ಶಿಫಾರಸ್ಸುಗಳ ಅನುಷ್ಠಾನ
ಆಡಳಿತ ಸುಧಾರಣಾ ಆಯೋಗವು ನೀಡಿದ್ದ 62 ಶಿಫಾರಸ್ಸುಗಳಲ್ಲಿ, 95% ಶಿಫಾರಸ್ಸುಗಳಿಗೆ ಒಪ್ಪಿಗೆ ನೀಡಿ ಆದೇಶಿಸಲಾಗಿದೆ. ಈಗಾಗಲೇ 13 ಶಿಫಾರಸ್ಸುಗಳು ಅನುಷ್ಠಾನಗೊಂಡಿದ್ದು, 49 ಶಿಫಾರಸ್ಸುಗಳು ಅನುಷ್ಠಾನ ಹಂತದಲ್ಲಿವೆ ಎಂದು ಸಚಿವರು ತಿಳಿಸಿದರು. ಉಳಿದ ಲೈಸೆನ್ಸ್‌ಗಳನ್ನು ಹರಾಜು ಹಾಕುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಅಬಕಾರಿ ಆಯುಕ್ತ ವೆಂಕಟೇಶ್, ಅಪರ ಆಯುಕ್ತರಾದ ಮಂಜುನಾಥ್, ನಾಗರಾಜಪ್ಪ, ಸುರೇಶ್, ಎಂಎಸ್‌ಎಐಎಲ್ ನಿರ್ದೇಶಕ ಚಂದ್ರಪ್ಪ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *