ಸರ್ವಧರ್ಮ ಸೌಹಾರ್ದದ ಪ್ರತೀಕ: ಜುಲೈ 18, 19ರಂದು ನವಲಗುಂದದ ಅಜಾತ ನಾಗಲಿಂಗಜ್ಜರ ಜಾತ್ರಾ ಮಹೋತ್ಸವ

Spread the love

ನವಲಗುಂದ: ಮಠದಲ್ಲೊಂದು ಬೈಬಲ್ ಇದೆ, ಆದರೆ ಅದು ಚರ್ಚ್ ಅಲ್ಲ… ಮೊಹರಂನ ಪಂಜಾಗಳಿವೆ, ಆದರೆ ಅದು ದರ್ಗಾ ಅಲ್ಲ… ಸಿದಗಿಯಿದೆ, ಆದರೆ ಅದು ರುದ್ರಭೂಮಿಯಲ್ಲ… ಇಂತಹ ಅಪರೂಪದ ವೈಶಿಷ್ಟ್ಯಗಳ ಮೂಲಕ ಜಗತ್ತಿಗೆ ಸರ್ವಧರ್ಮ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರುತ್ತಿರುವ ನವಲಗುಂದದ ಶ್ರೀ ಅಜಾತ ನಾಗಲಿಂಗೇಶ್ವರ ಮಠದಲ್ಲಿ ಈ ವರ್ಷದ 145ನೇ ಆರಾಧನಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಜುಲೈ 18 ಮತ್ತು 19ರಂದು ಅಜ್ಜನ ಆರಾಧನೆ ಹಾಗೂ ಪಲ್ಲಕ್ಕಿ ಮಹೋತ್ಸವವು ಭಕ್ತಾದಿಗಳ ಅಪಾರ ಸದ್ಭಾವನೆ, ಭಕ್ತಿ ಮತ್ತು ಸಂಭ್ರಮದೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.

ಎಲ್ಲ ಧರ್ಮಗಳ ಗಡಿಗಳನ್ನು ಮೀರಿ “ಮಾನವೀಯತೆಯೇ ಪರಮ ಧರ್ಮ” ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಅಜಾತ ನಾಗಲಿಂಗ ಶ್ರೀಗಳ ಪುಣ್ಯಕ್ಷೇತ್ರವು ಸರ್ವಧರ್ಮ ಸೌಹಾರ್ದದ ಜೀವಂತ ಪ್ರತೀಕವಾಗಿದೆ. ಇಲ್ಲಿ ಬೈಬಲ್ ಹಾಗೂ ಮೊಹರಂ ಪಂಜಾಗಳಿಗೆ ನಿತ್ಯ ಪೂಜೆ ನಡೆಯುವುದರ ಜೊತೆಗೆ ಸಿದಗಿಯನ್ನೂ ಆರಾಧಿಸಲಾಗುತ್ತದೆ. ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದ ಈ ಕ್ಷೇತ್ರಕ್ಕೆ ನಿತ್ಯವೂ ನೂರಾರು ಭಕ್ತರು ಭೇಟಿ ನೀಡಿ ತಮ್ಮ ಕಷ್ಟ-ಕಾರ್ಪಣ್ಯಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.

ಮೂಲತಃ ರಾಯಚೂರು ಜಿಲ್ಲೆಯ ಜವಳಗೇರಿ ಗ್ರಾಮದ ಮೌನಾಚಾರ್ಯ ಹಾಗೂ ನಾಗಮ್ಮ ದಂಪತಿಯ ಪುತ್ರರಾದ ಶ್ರೀ ಅಜಾತ ನಾಗಲಿಂಗ ಶ್ರೀಗಳು ಬಾಲ್ಯದಲ್ಲೇ ವೈರಾಗ್ಯ ಮನೋಭಾವ ಬೆಳೆಸಿಕೊಂಡು, ಲೋಕಕಲ್ಯಾಣಕ್ಕಾಗಿ ನವಲಗುಂದವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡರು. ಹಲವು ಪವಾಡಗಳ ಮೂಲಕ ಭಕ್ತರ ಮನ ಗೆದ್ದ ಶ್ರೀಗಳ 145ನೇ ಆರಾಧನಾ ಮಹೋತ್ಸವವು ಮತ್ತೊಮ್ಮೆ ಭಕ್ತರ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ.

ಜುಲೈ 18ರ ಶನಿವಾರ ಬೆಳಿಗ್ಗೆ ನಾಗಲಿಂಗ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನೆರವೇರಲಿದೆ. ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳು ಪೀಠಾಧೀಶರಾದ ಪೂಜ್ಯಶ್ರೀ ವೀರೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿವೆ. ಮಧ್ಯಾಹ್ನ 1 ಗಂಟೆಗೆ ಮಜಾರ (ಮಾದಲಿ) ಪೂಜೆ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ.

ಸಂಜೆ 6 ಗಂಟೆಗೆ ಧರ್ಮಸಭೆ ಹಾಗೂ 382ನೇ ನಾಗಲಿಂಗಾನುಭವ ಗೋಷ್ಠಿ ಜರುಗಲಿದ್ದು, ಶಹಾಪುರದ ಏಕದಂಡಗಿಮಠದ ಪೂಜ್ಯಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಸಂಗಮೇಶ್ವರಮಠದ ಪೂಜ್ಯಶ್ರೀ ಪ್ರಭುಜೀ ಮಹಾರಾಜರು, ಕಪ್ಪತ್ತಗುಡ್ಡ ನಂದಿವೇರಿಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಪೂಜ್ಯಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ವಸಂತಾಚಾರ್ಯ ಪತ್ತಾರ ಹಿರೇಕುಂಬಿ ಅವರ “ನಾಗಲಿಂಗ ಗೀತಾಂಜಲಿ” (ದ್ವಿತೀಯ ಮುದ್ರಣ) ಗ್ರಂಥ ಬಿಡುಗಡೆ ಹಾಗೂ ದಾನಿಗಳ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.

ಜುಲೈ 19ರ ರವಿವಾರ ಸಂಜೆ ಶ್ರೀಮಠದ ಪ್ರಮುಖ ಆಕರ್ಷಣೆಯಾದ ಭವ್ಯ ಪಲ್ಲಕ್ಕಿ ಹಾಗೂ ಮೇಣೆ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಮೆರವಣಿಗೆಯಲ್ಲಿ ಪುರವಂತಿಕೆ, ಭವ್ಯ ಡೊಳ್ಳು ವಾದನ, ದಾಲಪಟ್ಟಿ, ನಂದಿಕೋಲು, ಸಾಂಪ್ರದಾಯಿಕ ಕರಡಿಮಜಲು, ಕೇರಳದ ಚಂಡೆ ವಾದನ, ನಾದಸ್ವರ, ಜಾನಪದ ಕಲೆಯಾದ ಕೋಲಾಟ, ಬಾಜಾಭಜಂತ್ರಿ, ಗೊಂಬೆ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮತ್ತು ವಾದ್ಯ ವೈಭವಗಳು ಮೆರುಗು ನೀಡಲಿವೆ.

ದೇಶದಲ್ಲೇ ಸರ್ವಧರ್ಮ ಸೌಹಾರ್ದದ ಅಪರೂಪದ ಸಂಕೇತವಾಗಿ ವಿಶಿಷ್ಟ ಸ್ಥಾನ ಪಡೆದಿರುವ ನವಲಗುಂದದ ಅಜಾತ ನಾಗಲಿಂಗೇಶ್ವರ ಮಠವು, ಈ ಸಾಲಿನ ಜಾತ್ರಾ ಮಹೋತ್ಸವದ ಮೂಲಕ ಮತ್ತೊಮ್ಮೆ ಭಕ್ತ ಸಾಗರವನ್ನು ತನ್ನೆಡೆಗೆ ಆಹ್ವಾನಿಸುತ್ತಿದ್ದು, ಎರಡು ದಿನಗಳ ಕಾಲ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *