ಹುಬ್ಬಳ್ಳಿ: ಮದುವೆಯಾಗಿ ಐದನೇ ತಿಂಗಳಲ್ಲೇ ಪತ್ನಿ ಕೊಲೆ: ಕ್ಷುಲ್ಲಕ ಜಗಳಕ್ಕೆ ಹೆಲ್ಮೆಟ್‌ನಿಂದ ತಲೆಗೆ ಹೊಡೆದು ಹತ್ಯೆ; ಪತಿ ಪರಾರಿ

Spread the love

ಹುಬ್ಬಳ್ಳಿ: ಮದುವೆಯಾಗಿ ನಾಲ್ಕು ತಿಂಗಳು ಪೂರ್ಣಗೊಂಡು ಐದನೇ ತಿಂಗಳು ಆರಂಭವಾಗಿದ್ದರೂ ದಾಂಪತ್ಯ ಜೀವನ ಸರಿಯಾಗಿ ಸಾಗದ ಹಿನ್ನೆಲೆ ಕ್ಷುಲ್ಲಕ ಜಗಳವೇ ಯುವತಿಯ ಜೀವ ಕಸಿದಿರುವ ಘಟನೆ ಹುಬ್ಬಳ್ಳಿ ಸಮೀಪದ ತಾರಿಹಾಳ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಮೃತೆಯನ್ನು ಇಬ್ರಾಹಿಂಪುರ ಗ್ರಾಮದ ನಾಗರತ್ನ (22) ಎಂದು ಗುರುತಿಸಲಾಗಿದೆ. ಆರೋಪಿ ಪತಿ ತಾರಿಹಾಳ ಗ್ರಾಮದ ಗಣೇಶನಗರ ನಿವಾಸಿ ಶಿವರಾಜ್ ಹುಲಿಮನಿ (28) ಎಂದು ತಿಳಿದುಬಂದಿದೆ. ನಾಲ್ಕೂವರೆ ತಿಂಗಳ ಹಿಂದೆ ಇವರಿಬ್ಬರ ವಿವಾಹ ನಡೆದಿತ್ತು.

ಕುಟುಂಬದ ಮೂಲಗಳ ಪ್ರಕಾರ, ಮದುವೆಯಾದ ಬಳಿಕ ದಂಪತಿ ನಡುವೆ ಆಗಾಗ ಕಲಹ ಉಂಟಾಗುತ್ತಿದ್ದು, ನಾಗರತ್ನ ಪದೇಪದೇ ತವರು ಮನೆಗೆ ತೆರಳುತ್ತಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಬುಧವಾರವಷ್ಟೇ ತವರು ಮನೆಯಿಂದ ಪತಿಯ ಮನೆಗೆ ಮರಳಿದ್ದಳು.

ಶುಕ್ರವಾರ ಮುಂಜಾನೆ ಕ್ಷುಲ್ಲಕ ವಿಚಾರಕ್ಕೆ ಪತಿ-ಪತ್ನಿ ನಡುವೆ ಮತ್ತೆ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಶಿವರಾಜ್ ಹೆಲ್ಮೆಟ್‌ನಿಂದ ನಾಗರತ್ನಳ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಗರತ್ನ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್‌ಪಿ), ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್ ಮುರಗೇಶ ಚನ್ನಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿ ಶಿವರಾಜ್ ಹುಲಿಮನಿ ಬಂಧನಕ್ಕಾಗಿ ಜಾಲ ಬೀಸಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *