ಡಿ.ಜೆ.ಗೆ ನಿರ್ಬಂಧ: ಸರ್ಕಾರದ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ; ಹಾವೇರಿಯಲ್ಲಿ ಮೊದಲ ಎಫ್‌ಐಆರ್‌ ದಾಖಲು!

Spread the love

ಹಾವೇರಿ: ಗಣೇಶೋತ್ಸವದ ಮೆರವಣಿಗೆಗಳಲ್ಲಿ ಡಿ.ಜೆ. (ಡಿಸ್ಕ್ ಜಾಕಿ) ಬಳಸದಂತೆ ಸರ್ಕಾರ ನೀಡಿರುವ ಕಟ್ಟುನಿಟ್ಟಿನ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಹಾವೇರಿ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ನಿಯಮ ಮೀರಿ ಡಿ.ಜೆ. ಬಳಸಿದ ಆರೋಪದಡಿ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಸಕ್ತ ವರ್ಷದ ಗಣೇಶೋತ್ಸವದ ಮೊದಲ ಎಫ್‌ಐಆರ್ ದಾಖಲಾಗಿದೆ. ಯುವ ಸಮುದಾಯ ಸಂಭ್ರಮದ ಹೆಸರಿನಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತಂದರೆ ಕಾನೂನು ಕ್ರಮ ಎದುರಿಸುವುದು ಅನಿವಾರ್ಯ ಎಂಬುದನ್ನು ಈ ಘಟನೆ ಎತ್ತಿ ತೋರಿಸಿದೆ.

ಘಟನೆ ವಿವರ
ಹಾವೇರಿಯ ಸುಭಾಷ್ ವೃತ್ತದಲ್ಲಿ ‘ಹಾವೇರಿ ಕಾ ರಾಜಾ’ ಎಂಬ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಗಜಾನನ ಉತ್ಸವ ಸಮಿತಿಯು, ನಿಷಿದ್ಧವಿದ್ದರೂ ಡಿ.ಜೆ. ಸೌಂಡ್ ಸಿಸ್ಟಮ್ ಬಳಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 27ರಂದು ಸಂಜೆ 7.30 ರಿಂದ ರಾತ್ರಿ 11ರವರೆಗೆ ಅತಿಯಾದ ಶಬ್ದದ ಡಿ.ಜೆ. ಬಳಕೆ ಮಾಡಿ, ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಲಾಗಿದೆ ಎಂಬ ದೂರು ಆಧರಿಸಿ, ಹಾವೇರಿ ಶಹರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಜಾನನ ಉತ್ಸವ ಸಮಿತಿ ಮತ್ತು ಹುಂಬಿ ಡಿ.ಜೆ. ಸೌಂಡ್ ಸಿಸ್ಟಮ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಪಡೆದವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಯುವಜನರಿಗೆ ಎಚ್ಚರಿಕೆ
ಡಿ.ಜೆ.ಯಿಂದ ಹೊರಬರುವ ಅತಿಯಾದ ಶಬ್ದವು ಮಕ್ಕಳು, ವೃದ್ಧರು, ಹೃದಯ ರೋಗಿಗಳು ಮತ್ತು ಗರ್ಭಿಣಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈಗಾಗಲೇ ಡಿ.ಜೆ. ಸದ್ದಿನಿಂದಾಗಿ ಜಿಲ್ಲೆಯ ಒಬ್ಬ ಸಹಾಯಕ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಎಎಸ್‌ಐ) ಅವರ ಕಿವಿಯ ತಮಟೆ ಹಾನಿಗೊಳಗಾಗಿದೆ ಎಂದು ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ಅವರು ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು.

ಯುವಕರು ಉತ್ಸಾಹದಲ್ಲಿ ಡಿ.ಜೆ. ಸೌಂಡ್ ಸಿಸ್ಟಮ್‌ಗಳನ್ನು ಬಳಸುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಇದು ಕೇವಲ ಸಂಭ್ರಮದ ವಿಚಾರವಲ್ಲ. ಸರ್ಕಾರದ ಆದೇಶ ಉಲ್ಲಂಘಿಸುವುದು ಕಾನೂನಿನ ದೃಷ್ಟಿಯಲ್ಲಿ ಗಂಭೀರ ಅಪರಾಧ. ಜೊತೆಗೆ, ಇದು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಪ್ರಶ್ನೆಯೂ ಹೌದು. ಈ ಘಟನೆ ಡಿ.ಜೆ. ಬಳಸುವ ಉತ್ಸವ ಸಮಿತಿಗಳು ಹಾಗೂ ಡಿ.ಜೆ. ಸೌಂಡ್ ಸಿಸ್ಟಮ್‌ಗಳ ಮಾಲೀಕರಿಗೆ ಒಂದು ಸ್ಪಷ್ಟ ಸಂದೇಶ ರವಾನಿಸಿದೆ: ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಅನಿವಾರ್ಯ. ಎಂದು ಎಚ್ಚರಿಸಿದ್ದಾರೆ.

ಹೆಚ್ಚುವರಿ ಪೊಲೀಸ್‌ಎಸ್ಪಿ ಎಲ್.ವೈ.ಶಿರಕೋಳ ಅವರು ಮಾತಾನಡಿ: “ಡಿ.ಜೆ. ಬಳಕೆ ನಿಷೇಧಿಸಿ ಸರ್ಕಾರ ಹೊರಡಿಸಿರುವ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ.” ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *