
ಹೈದರಾಬಾದ್, ಮೇ 30: ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೆಲವೊಮ್ಮೆ ಅದರಲ್ಲಿನ ಲೋಪದೋಷಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸುವುದರ ಜೊತೆಗೆ ಹಾಸ್ಯಾಸ್ಪದ ಘಟನೆಗಳಿಗೂ ಕಾರಣವಾಗುತ್ತವೆ. ಇಂತಹ ವಿಚಿತ್ರ ಪ್ರಸಂಗವೊಂದು ತೆಲಂಗಾಣದಲ್ಲಿ ನಡೆದಿದ್ದು, ದೇವಸ್ಥಾನದಲ್ಲಿ ಹರಕೆ ಸಲ್ಲಿಸಿ ತಲೆ ಬೋಳಿಸಿಕೊಂಡು ಬಂದ ಕೂಲಿ ಕಾರ್ಮಿಕನನ್ನು ಸರ್ಕಾರದ ಡಿಜಿಟಲ್ ಹಾಜರಾತಿ ಆ್ಯಪ್ ಗುರುತಿಸಲು ನಿರಾಕರಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಇನುಗುರ್ತಿ ಮಂಡಲದ ಕೋಮಟಿಪಲ್ಲಿ ಗ್ರಾಮದ ದಿನಗೂಲಿ ಕಾರ್ಮಿಕ ಮಳ್ಳಾಲ ಶ್ರೀನಿವಾಸ್ ಇತ್ತೀಚೆಗೆ ಕೊಂಡಗಟ್ಟು ವೀರ ಹನುಮಾನ್ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸಂಪ್ರದಾಯದಂತೆ ದೇವರಿಗೆ ತಮ್ಮ ತಲೆಗೂದಲನ್ನು ಮುಡಿಪಾಗಿ ಅರ್ಪಿಸಿದ್ದರು. ದೇವಸ್ಥಾನದಿಂದ ಮರಳಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ಆರ್ಇಜಿಎ) ಕಾಮಗಾರಿಗೆ ಹಾಜರಾದಾಗ ಅವರಿಗೆ ಅನಿರೀಕ್ಷಿತ ಸಮಸ್ಯೆಯೊಂದು ಎದುರಾಯಿತು.
ನರೇಗಾ ಕಾಮಗಾರಿಗಳಲ್ಲಿ ಪಾರದರ್ಶಕತೆ ಮತ್ತು ಹಾಜರಾತಿ ಪರಿಶೀಲನೆಗಾಗಿ ಬಳಸಲಾಗುತ್ತಿರುವ ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (ಎನ್ಎಂಎಂಎಸ್) ಆ್ಯಪ್ನ ಮುಖ ಗುರುತಿಸುವಿಕೆ ತಂತ್ರಜ್ಞಾನವು ಶ್ರೀನಿವಾಸ್ ಅವರ ಮುಖವನ್ನು ಗುರುತಿಸಲು ವಿಫಲವಾಯಿತು. ತಲೆ ಮುಂಡನ ಮಾಡಿಕೊಂಡಿದ್ದ ಕಾರಣ ಅವರ ಪ್ರಸ್ತುತ ಮುಖದ ಚಿತ್ರವು ಹಿಂದಿನ ಪ್ರೊಫೈಲ್ನೊಂದಿಗೆ ಹೊಂದಿಕೆಯಾಗದೆ, ಆ್ಯಪ್ ಪದೇ ಪದೇ ಲಾಗಿನ್ ಪ್ರಕ್ರಿಯೆಯನ್ನು ತಿರಸ್ಕರಿಸುತ್ತಿತ್ತು. ಹಲವು ಬಾರಿ ಪ್ರಯತ್ನಿಸಿದರೂ ಹಾಜರಾತಿ ದಾಖಲಾಗದ ಕಾರಣ ಶ್ರೀನಿವಾಸ್ ಹಾಗೂ ಮೇಲ್ವಿಚಾರಕರು ಆತಂಕಕ್ಕೀಡಾದರು.

ಒಂದು ದಿನದ ಕೂಲಿ ಕೈತಪ್ಪುವ ಭೀತಿಯ ನಡುವೆ ಶ್ರೀನಿವಾಸ್ ಅವರಿಗೆ ಸಹಾಯ ಮಾಡಲು ಸಹೋದ್ಯೋಗಿಯಾಗಿದ್ದ ಮಹಿಳಾ ಕಾರ್ಮಿಕೆಯೊಬ್ಬರು ಹೊಸ ಉಪಾಯವೊಂದನ್ನು ಕಂಡುಹಿಡಿದರು. ಅವರು ತಮ್ಮ ಉದ್ದ ಕೂದಲನ್ನು ಶ್ರೀನಿವಾಸ್ ಅವರ ಮುಂಡನಗೊಂಡ ತಲೆಯ ಮೇಲ್ಭಾಗದಲ್ಲಿ ಕೂದಲಿನಂತೆ ಹರಡಿ ಹಿಡಿದರೆ, ಮುಖದ ಮೇಲಿದ್ದ ಮೀಸೆಯನ್ನೂ ಮಸಿಯಿಂದ ಸ್ಪಷ್ಟವಾಗಿ ಗುರುತಿಸುವ ಪ್ರಯತ್ನ ಮಾಡಲಾಯಿತು. ಬಳಿಕ ಮತ್ತೊಮ್ಮೆ ಮುಖ ಗುರುತಿಸುವಿಕೆ ಪ್ರಕ್ರಿಯೆ ನಡೆಸಿದಾಗ, ಅಚ್ಚರಿಯ ರೀತಿಯಲ್ಲಿ ಆ್ಯಪ್ ತಕ್ಷಣವೇ ಶ್ರೀನಿವಾಸ್ ಅವರನ್ನು ಗುರುತಿಸಿ ಹಾಜರಾತಿಯನ್ನು ಯಶಸ್ವಿಯಾಗಿ ದಾಖಲಿಸಿತು.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಒಂದು ಕಡೆ ಈ ಪ್ರಸಂಗ ಜನರಲ್ಲಿ ನಗುವು ಮೂಡಿಸಿದರೆ, ಮತ್ತೊಂದೆಡೆ ಸರ್ಕಾರದ ತಂತ್ರಜ್ಞಾನದ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.

ಈ ಕುರಿತು ಸ್ಥಳೀಯ ಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಾರದರ್ಶಕತೆಗಾಗಿ ಜಾರಿಗೆ ತರಲಾದ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳಿಂದ ಬಡ ಕಾರ್ಮಿಕರು ಸಂಕಷ್ಟ ಅನುಭವಿಸಬೇಕಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮುಖದ ರೂಪದಲ್ಲಿ ಉಂಟಾಗುವ ಸಾಮಾನ್ಯ ಬದಲಾವಣೆಗಳು, ಗಡ್ಡ-ಮೀಸೆ, ಕೂದಲಿನ ಶೈಲಿ ಅಥವಾ ತಲೆ ಮುಂಡನದಂತಹ ಕಾರಣಗಳಿಂದ ಕಾರ್ಮಿಕರ ಹಾಜರಾತಿ ದಾಖಲಾಗದಿದ್ದರೆ ಅವರ ಕೂಲಿಯೇ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ಇಂತಹ ಲೋಪದೋಷಗಳನ್ನು ತಕ್ಷಣ ಸರಿಪಡಿಸಿ, ಎಲ್ಲ ಸಂದರ್ಭಗಳಲ್ಲಿಯೂ ಕಾರ್ಮಿಕರನ್ನು ನಿಖರವಾಗಿ ಗುರುತಿಸುವ ವ್ಯವಸ್ಥೆಯನ್ನು ರೂಪಿಸುವಂತೆ ಅಧಿಕಾರಿಗಳನ್ನು ಅವರು ಆಗ್ರಹಿಸಿದ್ದಾರೆ.

