
ವಿಜಯಪುರ: ಇಷ್ಟು ದಿನ ಶಾಂತವಾಗಿದ್ದ ಭೀಮಾತೀರದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಕ್ತಪಾತವಾಗಿದ್ದು, ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಗೂ ಗುಂಡು ಹಾರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವಿನ ಜಮೀನು ವ್ಯಾಜ್ಯವೇ ಈ ನರಮೇಧಕ್ಕೆ ಕಾರಣ ಎಂದು ತಿಳಿದುಬಂದಿದೆ. ದಾಳಿಯ ತೀವ್ರತೆಗೆ ನಿರಾಳೆ ಕುಟುಂಬದ ಪ್ರಮುಖರು ಹಾಗೂ ಅವರ ಬೆಂಬಲಿಗರು ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ ಮತ್ತು ಶಬ್ಬಿರ್ ನದಾಫ್ ಎಂದು ಗುರುತಿಸಲಾಗಿದ್ದು, ಮೃತರಲ್ಲಿ ಐವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮೃತರ ಕುಟುಂಬ ಮತ್ತು ಹತ್ತಿರದ ಗ್ರಾಮದ ಇನ್ನೊಂದು ಕುಟುಂಬದ ನಡುವೆ ಸುಮಾರು ೧೦ ಎಕರೆ ಜಮೀನಿಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ವಿವಾದವಿತ್ತು. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಗ್ರಾಮದಲ್ಲಿ ಸಂಧಾನ ಸಭೆ ಕರೆಯಲಾಗಿತ್ತು. ಆದರೆ ಸಂಧಾನದ ವೇಳೆ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಭುಗಿಲೆದ್ದಿದೆ. ಈ ವೇಳೆ ಎದುರಾಳಿಗಳು ಹಠಾತ್ ಆಗಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ತದನಂತರ ಗುಂಡಿನ ಸುರಿಮಳೆಗರೆದಿದ್ದಾರೆ.
ಈ ಭೀಕರ ಹತ್ಯಾಕಾಂಡದಿಂದಾಗಿ ಇಡೀ ವಿಜಯಪುರ ಜಿಲ್ಲೆ ಬೆಚ್ಚಿಬಿದ್ದಿದ್ದು, ಗೋವಿಂದಪುರ ಗ್ರಾಮದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ದಂಡು ಸಶಸ್ತ್ರ ಪಡೆಗಳೊಂದಿಗೆ ಸ್ಥಳಕ್ಕೆ ಧಾವಿಸಿದೆ.

ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗ್ರಾಮದಲ್ಲಿ ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಘಟನೆ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.

