ದೊಡ್ಡಬಳ್ಳಾಫುರ:ಪಟಾಕಿ ಅವಘಡ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಲಕ ಸಾವು, ಹಲವರಿಗೆ ಸುಟ್ಟ ಗಾಯ

Spread the love

ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ನಡೆದ ಪಟಾಕಿ ಅವಘಡದಿಂದ 15 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಪೊಲೀಸ್ ಕಾನ್ಸ್ಟೆಬಲ್ ಸೇರಿ ಹಲವರು ಗಾಯಗೊಂಡಿರುವ ದುರ್ಘಟನೆ ದೊಡ್ಡಬಳ್ಳಾಪುರ ಹೊರವಲಯದ ಮುತ್ತೂರಿನಲ್ಲಿ ನಡೆದಿದೆ.
ಮೃತ ಬಾಲಕನನ್ನು ತನುಷ್ ರಾವ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತನುಷ್ ರಾವ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ:
ಶುಕ್ರವಾರ ಸಂಜೆ 5.30ರ ಸುಮಾರಿಗೆ ‘ಫ್ರೆಂಡ್ಸ್ ವಿನಾಯಕ ಗ್ರೂಪ್’ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಗೆ ಕರೆಸಲಾಗಿದ್ದ ಪವರ್ ಲಿಫ್ಟರ್ ವಾಹನ ಬಿಸಿಯಾಗಿ, ಅದರ ಮೇಲೆ ಇಡಲಾಗಿದ್ದ ಪಟಾಕಿಗಳು ಏಕಾಏಕಿ ಸ್ಫೋಟಗೊಂಡಿವೆ.

ಈ ಅವಘಡದಿಂದ ವಿದ್ಯಾರ್ಥಿಗಳಾದ ಗಣೇಶ್, ಯೋಗೇಶ್, ಪವರ್ ಲಿಫ್ಟರ್ ಚಾಲಕ ಮುನಿರಾಜು, ನಾಗರಾಜು, ಚೇತನ್, ಶಾವಿ ಅವರಿಗೆ ಸುಟ್ಟ ಗಾಯಗಳಾಗಿವೆ. ಅಲ್ಲದೆ, ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ ಜಾಕಿರ್ ಹುಸೇನ್ ಅವರ ಕೈಗೆ ಪಟಾಕಿ ಸಿಡಿದು ಗಾಯವಾಗಿದೆ.

ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಸಿ.ಕೆ. ಬಾಬಾ, ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್, ಡಿವೈಎಸ್ಪಿ ರವಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *