
ಕುಂದಗೋಳ: ತುರ್ತು ಚಿಕಿತ್ಸಾ ಸೇವೆಗಳ ವಿಳಂಬ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ನಿರ್ಲಕ್ಷ್ಯ ಮತ್ತೊಂದು ಅಮಾಯಕ ಜೀವವನ್ನು ಬಲಿತೆಗೆದುಕೊಂಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಸಂಶಿ ಗ್ರಾಮದ ಸಮೀಪ ನಡೆದಿದೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಪ್ಪತ್ತು ವರ್ಷದ ವಿದ್ಯಾರ್ಥಿ ಆನಂದ್ ಬಸಪ್ಪ ಮುಂಡರಗಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಮೃತಪಟ್ಟಿದ್ದು, ಆಂಬುಲೆನ್ಸ್ ಸಕಾಲಕ್ಕೆ ಬಂದಿದ್ದರೆ ಯುವಕನ ಪ್ರಾಣ ಉಳಿಯಬಹುದಿತ್ತು ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ತಾಲೂಕಿನ ಗುಡಗೇರಿ ಗ್ರಾಮದ ನಿವಾಸಿಯಾಗಿದ್ದ ಆನಂದ್, ಭಾನುವಾರ ರಾತ್ರಿ ಸುಮಾರು 9 ಗಂಟೆಯ ವೇಳೆ ಹುಬ್ಬಳ್ಳಿ–ಲಕ್ಷ್ಮೀಶ್ವರ ರಸ್ತೆಯ ಪಶುಪತಿಹಾಳ ಮತ್ತು ಸಂಶಿ ಗ್ರಾಮದ ನಡುವೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ನೀರಿನ ಟ್ಯಾಂಕರ್ ಜೋಡಿಸಿದ್ದ ಟ್ರ್ಯಾಕ್ಟರ್‌ನ್ನು (ಕೆಎ 37 ಟಿಎ 1566) ಚಲಾಯಿಸುತ್ತಿದ್ದ ಚಾಲಕ ಮಂಜುನಾಥ ಚನ್ನಬಸಪ್ಪ ಮೊರಬದ ಎಂಬಾತ ಯಾವುದೇ ಮುನ್ನೆಚ್ಚರಿಕೆ ನೀಡದೇ ರಸ್ತೆ ಮಧ್ಯದಲ್ಲೇ ವಾಹನ ನಿಲ್ಲಿಸಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಡೀಸೆಲ್ ತರಲು ತೆರಳುತ್ತಿದ್ದ ಆನಂದ್ ಟ್ರ್ಯಾಕ್ಟರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ಬೈಕ್ ಜಖಂಗೊಂಡು ಆತನ ತಲೆಗೆ ಗಂಭೀರ ಗಾಯಗಳಾಗಿದ್ದವು.
ಅಪಘಾತದ ತಕ್ಷಣ ಸ್ಥಳೀಯರು ಆಂಬುಲೆನ್ಸ್‌ಗೆ ಕರೆ ಮಾಡಿದರೂ ಸಹ, ತುರ್ತು ಸೇವೆ ಸ್ಥಳಕ್ಕೆ ತಲುಪಲು ಸುಮಾರು ಒಂದು ಗಂಟೆ ವಿಳಂಬವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದರೂ, ಆಂಬುಲೆನ್ಸ್ ಸಕಾಲಕ್ಕೆ ಬಾರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಸ್ಥಳೀಯರೇ ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ ಅವರಿಗೆ ಮಾಹಿತಿ ನೀಡಿದ್ದು, ಅವರ ಸಹಕಾರದಿಂದ ಗಾಯಾಳುವನ್ನು ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಆನಂದ್ ಕೊನೆಯುಸಿರೆಳೆದಿದ್ದಾನೆ.
ಈ ಘಟನೆ ಬಳಿಕ ಆರೋಗ್ಯ ಇಲಾಖೆಯ ತುರ್ತು ಸೇವೆಗಳ ಕಾರ್ಯವೈಖರಿಯ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪಘಾತದಂತಹ ಗಂಭೀರ ಸಂದರ್ಭಗಳಲ್ಲಿ ಆಂಬುಲೆನ್ಸ್ ವಿಳಂಬವಾಗುತ್ತಿರುವುದು ಜೀವಹಾನಿಗೆ ಕಾರಣವಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮೀಣ ಭಾಗಗಳಲ್ಲಿ ತುರ್ತು ವೈದ್ಯಕೀಯ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಇತ್ತ ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗುಡಗೇರಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಕಂಡು ಸ್ಥಳೀಯರ ಕಣ್ಣೀರು ಹರಿಯಿತು. ಪ್ರಕರಣ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

