
ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಅಗತ್ಯ ಪ್ರಮಾಣದ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಲಭ್ಯವಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಗುರುವಾರ ಕೃಷಿ ಇಲಾಖೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ರಸಗೊಬ್ಬರ ಮಾರಾಟಗಾರರು ಮತ್ತು ರೈತ ಪ್ರಮುಖರೊಂದಿಗೆ ಗೂಗಲ್ ಮೀಟ್ ಮೂಲಕ ಜರುಗಿದ ತುರ್ತು ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಜೂನ್ ಮೊದಲ ವಾರದಿಂದ ಮುಂಗಾರು ಹಂಗಾಮು ಆರಂಭವಾಗಲಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ರೈತರಿಗೆ ಸಕಾಲದಲ್ಲಿ ಬೀಜ ಮತ್ತು ರಸಗೊಬ್ಬರ ತಲುಪಿಸುವ ಜವಾಬ್ದಾರಿ ಕೃಷಿ ಇಲಾಖೆಯ ಮೇಲಿದೆ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ನಕಲಿ ಬೀಜ ಹಾಗೂ ಕಳಪೆ ಗುಣಮಟ್ಟದ ರಸಗೊಬ್ಬರ ಮಾರಾಟವಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು. ಅನಧಿಕೃತ ದಾಸ್ತಾನು, ಕೃತಕ ಅಭಾವ ಸೃಷ್ಟಿ ಹಾಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ವಿಚಕ್ಷಣ ದಳ ರಚಿಸಿ ನಿರಂತರ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ವಿಳಂಬ ಉಂಟಾಗುತ್ತಿರುವುದನ್ನು ಉಲ್ಲೇಖಿಸಿದ ಜಿಲ್ಲಾಧಿಕಾರಿಗಳು, ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ರಸಗೊಬ್ಬರ ಮತ್ತು ಬೀಜ ದಾಸ್ತಾನು ಸಂಗ್ರಹಿಸಿ ಮಾರಾಟಗಾರರಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು. ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಂದ ಬೀಜಗಳನ್ನು ಹಾಗೂ ಸಮೀಪದ ಮಾನ್ಯತೆ ಪಡೆದ ಮಾರಾಟ ಕೇಂದ್ರಗಳಿಂದ ಸರ್ಕಾರ ನಿಗದಿಪಡಿಸಿದ ದರದಲ್ಲಿ ಯೂರಿಯಾ ಪಡೆಯುವಂತೆ ಮನವಿ ಮಾಡಿದರು.
ಸರ್ಕಾರದ ಸೂಚನೆಯಂತೆ ಫ್ರೂಟ್ (FRUITS) ಗುರುತಿನ ಸಂಖ್ಯೆ ಹೊಂದಿರುವ ರೈತರಿಗೆ ಮಾತ್ರ ಯೂರಿಯಾ ವಿತರಿಸಲಾಗುತ್ತದೆ. ಕೆ-ಕಿಸಾನ್ ತಂತ್ರಾಂಶ ಹಾಗೂ ಪಿಒಎಸ್ ಯಂತ್ರದ ಮೂಲಕವೇ ವಿತರಣೆಯಾಗಲಿದ್ದು, ಪ್ರತಿ ರೈತನ ಭೂವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ ಒಂದು ಚೀಲ ಯೂರಿಯಾ ನೀಡಲಾಗುವುದು ಎಂದು ತಿಳಿಸಿದರು.
ರೈತರಿಗೆ ಲಿಂಕ್ ಗೊಬ್ಬರ ನೀಡುವುದು, ಎಂಆರ್ಪಿ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು, ರಶೀದಿ ನೀಡದೇ ಮಾರಾಟ ಮಾಡುವುದು ಹಾಗೂ ದರ ಮತ್ತು ದಾಸ್ತಾನು ವಿವರಗಳನ್ನು ಪ್ರದರ್ಶಿಸದೇ ಇರುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ದೂರು ಬಂದಲ್ಲಿ ಸಂಬಂಧಿಸಿದ ಅಂಗಡಿಗಳ ಪರವಾನಿಗೆ ಅಮಾನತು ಅಥವಾ ರದ್ದುಪಡಿಸಲಾಗುವುದು ಎಂದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2,82,677 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಕುಂದಗೋಳ ತಾಲೂಕಿನಲ್ಲಿ 52,150 ಹೆಕ್ಟೇರ್, ನವಲಗುಂದದಲ್ಲಿ 58,843 ಹೆಕ್ಟೇರ್, ಧಾರವಾಡದಲ್ಲಿ 57,855 ಹೆಕ್ಟೇರ್ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಆಹಾರ ಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಬೀಜ ಹಾಗೂ ವಾಣಿಜ್ಯ ಬೆಳೆಗಳ ಬಿತ್ತನೆ ನಡೆಯಲಿದೆ.
ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ಒಟ್ಟು 24,793.76 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಲಭ್ಯವಿದೆ. ಇದರಲ್ಲಿ 6,612.62 ಮೆಟ್ರಿಕ್ ಟನ್ ಯೂರಿಯಾ, 4,526.72 ಮೆಟ್ರಿಕ್ ಟನ್ ಡಿಎಪಿ, 2,562.16 ಮೆಟ್ರಿಕ್ ಟನ್ ಪೊಟಾಶ್, 11,299.31 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಹಾಗೂ 453.95 ಮೆಟ್ರಿಕ್ ಟನ್ ಎಸ್ಎಸ್ಪಿ ರಸಗೊಬ್ಬರ ಸಂಗ್ರಹವಿದೆ ಎಂದು ಮಾಹಿತಿ ನೀಡಲಾಯಿತು.
ಬಿತ್ತನೆ ಬೀಜಗಳ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸೋಯಾಅವರೆ, ಶೇಂಗಾ, ಉದ್ದು, ಹೆಸರು, ಭತ್ತ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಬೀಜ ದಾಸ್ತಾನು ಇರಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯ 14 ರೈತ ಸಂಪರ್ಕ ಕೇಂದ್ರಗಳು ಹಾಗೂ 17 ಹೆಚ್ಚುವರಿ ಕೇಂದ್ರಗಳ ಮೂಲಕ ಬೀಜ ವಿತರಣೆ ನಡೆಯಲಿದೆ ಎಂದರು.
ಜಿಲ್ಲೆಯ 288 ಮಾನ್ಯತೆ ಪಡೆದ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಕೆ-ಕಿಸಾನ್ ತಂತ್ರಾಂಶದ ಮೂಲಕ ವಿತರಣೆ ನಡೆಯುತ್ತಿದ್ದು, ನಿಯಮ ಉಲ್ಲಂಘನೆ ತಡೆಯಲು ಅಧಿಕಾರಿಗಳು ಈಗಾಗಲೇ 539 ಪರಿಶೀಲನಾ ಭೇಟಿಗಳನ್ನು ನಡೆಸಿದ್ದಾರೆ. ನಿಯಮ ಮೀರಿ ವರ್ತಿಸಿದ 126 ಕೇಂದ್ರಗಳಿಗೆ ನೋಟಿಸ್ ನೀಡಲಾಗಿದ್ದು, 93 ಕೇಂದ್ರಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೆ 7 ಮಾರಾಟ ಕೇಂದ್ರಗಳ ಪರವಾನಿಗೆ ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ತೊಂದರೆ ಉಂಟಾದಲ್ಲಿ ರೈತರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಅಥವಾ ಜಿಲ್ಲಾಧಿಕಾರಿಗಳ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮುಂಗಾರು ಹಂಗಾಮಿನ ಸಿದ್ಧತೆ, ದಾಸ್ತಾನು ಮತ್ತು ವಿತರಣಾ ವ್ಯವಸ್ಥೆಯ ಕುರಿತು ವಿವರಿಸಿದರು. ಉತ್ತಮ ಇಳುವರಿಗಾಗಿ ರೈತರು ಭೂಮಿಯಲ್ಲಿ ಸಮರ್ಪಕ ತೇವಾಂಶ ಇದ್ದಾಗ ಮಾತ್ರ ಬಿತ್ತನೆ ಕೈಗೊಳ್ಳಬೇಕು ಹಾಗೂ ನ್ಯಾನೋ ಯೂರಿಯಾ ಮತ್ತು ಡಿಎಪಿ ಬಳಕೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ವಿಡಿಯೋ ಸಂವಾದದಲ್ಲಿ ವಿವಿಧ ತಾಲೂಕಿನ ಕೃಷಿ ಅಧಿಕಾರಿಗಳು, ರೈತರು ಹಾಗೂ ರಸಗೊಬ್ಬರ ಮಾರಾಟಗಾರರು ಭಾಗವಹಿಸಿ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಂಡರು.

