
ಕುಂದಗೋಳ: ಸಾಲ ಬಾಧೆ ಹಾಗೂ ಬೆಳೆ ನಷ್ಟದಿಂದ ಮನನೊಂದ ರೈತರೊಬ್ಬರು ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಕೇಡಿಸುವ ಘಟನೆ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದಿದೆ. ಹಿರೇಹರಕುಣಿ ಗ್ರಾಮದ ನಿವಾಸಿಯಾದ ಶಿವಾನಂದ ವಿರುಪಾಕ್ಷಪ್ಪ ಹೂಗಾರ (64) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ರೈತರಾಗಿದ್ದಾರೆ.
ಮೃತ ಶಿವಾನಂದ ಅವರು ತಮ್ಮ ಜಮೀನು ಸಾಗುವಳಿಗಾಗಿ ಹಿರೇಹರಕುಣಿಯ ಕೆ.ವಿ.ಜಿ. ಬ್ಯಾಂಕ್ನಲ್ಲಿ 02 ಲಕ್ಷ ರೂಪಾಯಿಗಳ ಬೆಳೆ ಸಾಲವನ್ನು ಮಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಜಮೀನಿನಲ್ಲಿ ಸರಿಯಾಗಿ ಬೆಳೆ ಬಾರದೆ, ಇತ್ತ ಬಂದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯೂ ಸಿಗದೆ ತೀವ್ರ ನಷ್ಟ ಅನುಭವಿಸಿದ್ದರು. ಇದರಿಂದಾಗಿ ಮಾಡಿದ ಸಾಲವನ್ನು ತೀರಿಸುವುದು ಹೇಗೆ ಹಾಗೂ ಮುಂದಿನ ಕೌಟುಂಬಿಕ ಜವಾಬ್ದಾರಿಯನ್ನು ನಿಭಾಯಿಸುವುದು ಹೇಗೆ ಎಂಬ ಚಿಂತೆಯಲ್ಲಿ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಇದೇ ಮನಸ್ತಾಪದಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಶಿವಾನಂದ ಅವರು, ಶುಕ್ರವಾರ ಬೆಳಿಗ್ಗೆ 9:00 ರಿಂದ 10:30 ರ ನಡುವಿನ ಅವಧಿಯಲ್ಲಿ ತರ್ಲಘಟ್ಟ ಗ್ರಾಮದ ಹದ್ದಿಯಲ್ಲಿರುವ ತಮ್ಮದೇ ಹೊಲದ ಶೆಡ್ನಲ್ಲಿ ದನಗಳ ಉಣ್ಣೆ ಕ್ರಿಮಿ ನಾಶಕವನ್ನು ಕುಡಿದಿದ್ದಾರೆ. ತಕ್ಷಣವೇ ತೀವ್ರ ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆಗಾಗಿ ಕುಂದಗೋಳದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಗುಡಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

