ಮಹಿಳಾ ಪೊಲೀಸ್ ಠಾಣೆಗಳು ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಕೇಂದ್ರಗಳಾಗಲಿ: ಡಾ. ನಾಗಲಕ್ಷ್ಮಿ ಚೌದರಿ

Spread the love

ಧಾರವಾಡ: ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ಹಾಗೂ ಸೈಬರ್ ಅಪರಾಧ ಪ್ರಕರಣಗಳಿಗೆ ತ್ವರಿತ ಸ್ಪಂದನೆ ನೀಡುವುದು ಪೊಲೀಸ್ ಇಲಾಖೆಯ ಮೊದಲ ಆದ್ಯತೆಯಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಹೇಳಿದರು.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಸಮೀಪದ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ, ಮೂಲಸೌಕರ್ಯಗಳು ಹಾಗೂ ಮಹಿಳೆಯರಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಿದ ಅವರು, ಮಹಿಳೆಯರು ಯಾವುದೇ ರೀತಿಯ ಅನ್ಯಾಯ, ಶೋಷಣೆ ಅಥವಾ ಕಿರುಕುಳಕ್ಕೆ ಒಳಗಾದಾಗ ಭಯಪಡದೆ ಮುಂದೆ ಬಂದು ದೂರು ನೀಡಬೇಕು ಎಂದು ತಿಳಿಸಿದರು.

ಮಹಿಳಾ ಪೊಲೀಸ್ ಠಾಣೆಗಳು ಮಹಿಳೆಯರಿಗೆ ಸುರಕ್ಷತೆ, ಸುಭದ್ರತೆ ಹಾಗೂ ಆತ್ಮವಿಶ್ವಾಸ ನೀಡುವ ಕೇಂದ್ರಗಳಾಗಬೇಕು. ಪೊಲೀಸ್ ಸಿಬ್ಬಂದಿ ಮಹಿಳೆಯರೊಂದಿಗೆ ಮಾನವೀಯತೆ ಹಾಗೂ ವಿನಯದಿಂದ ವರ್ತಿಸುವುದು ಅಗತ್ಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಠಾಣೆಯ ದಾಖಲೆಗಳು, ಮಹಿಳೆಯರಿಗಾಗಿ ಕಲ್ಪಿಸಲಾದ ಪ್ರತ್ಯೇಕ ಕೊಠಡಿಗಳು, ಸಲಹಾ ಕೇಂದ್ರ ಹಾಗೂ ದೂರು ನಿರ್ವಹಣಾ ವ್ಯವಸ್ಥೆಯನ್ನು ಅವಲೋಕಿಸಿದ ಡಾ. ನಾಗಲಕ್ಷ್ಮಿ ಚೌದರಿ, ಮಹಿಳಾ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ವಿಳಂಬ ಮಾಡದೇ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರಲ್ಲಿ ಮಹಿಳಾ ಸಹಾಯವಾಣಿ, ಕಾನೂನು ನೆರವು ಹಾಗೂ ಮಹಿಳಾ ಆಯೋಗದ ಸೇವೆಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಮಹಿಳೆಯರ ಸುರಕ್ಷತೆ ಮತ್ತು ಗೌರವ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮನಗೌಡ ಸಂಕನಾಳ, ಪೊಲೀಸ್ ಇಲಾಖೆ ಅಧಿಕಾರಿಗಳು, ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *