ನಿಯಮಬಾಹಿರ ಬಡ್ಡಿ ವ್ಯವಹಾರ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಪೊಲೀಸ್ ವಶಕ್ಕೆ

Spread the love

ನಿಯಮಬಾಹಿರ ಬಡ್ಡಿ ವ್ಯವಹಾರ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಪೊಲೀಸ್ ವಶಕ್ಕೆ

ಬೆಳಗಾವಿ: ನಿಯಮಬಾಹಿರ ಹಾಗೂ ಅನಧಿಕೃತ ಬಡ್ಡಿ ವ್ಯವಹಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸಹಕಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಜಂಟಿ ತಂಡ ಸುದೀರ್ಘ ದಾಳಿ ನಡೆಸಿ ಶುಕ್ರವಾರ ಈ ಕ್ರಮ ಕೈಗೊಂಡಿದೆ.

ಆರೋಪಿ ಶಿವಾನಂದ ಯಾವುದೇ ಆರ್‌ಬಿಐ ನಿಯಮಗಳನ್ನು ಪಾಲಿಸದೆ ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಹಣ ಸಂಗ್ರಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸುಮಾರು 35 ಸಾವಿರಕ್ಕೂ ಹೆಚ್ಚು ಜನರಿಂದ ಠೇವಣಿ ಪಡೆದು ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣ ಸಂಬಂಧ ಉಪವಿಭಾಗಾಧಿಕಾರಿ ಶ್ರವಣ ನಾಯಕ ನೇತೃತ್ವದ ತಂಡವು ಆರೋಪಿಯ ಮನೆ, ಕಚೇರಿ ಸೇರಿದಂತೆ ಹಲವು ಸ್ಥಳಗಳ ಮೇಲೆ ಗುರುವಾರ ನಸುಕಿನಲ್ಲೇ ದಾಳಿ ನಡೆಸಿತ್ತು. ಸತತ 24 ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸಹಕಾರ ಇಲಾಖೆಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಶಕಗಳಿಂದ ಇಷ್ಟೊಂದು ದೊಡ್ಡ ಮಟ್ಟದ ಹೂಡಿಕೆ ವ್ಯವಹಾರ ನಡೆಯುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಕಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿವಾನಂದ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. “ನಾನು ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ. ನನ್ನ ಬಳಿ 15 ಸಾವಿರ ಬಂದೂಕುಗಳಿವೆ. ಬೇಕಿದ್ದರೆ 2028ಕ್ಕೆ ಮುಖ್ಯಮಂತ್ರಿಯಾಗಿ ತೋರಿಸುತ್ತೇನೆ” ಎಂದು ಈತ ಹೇಳಿದ್ದಾನೆ ಎನ್ನಲಾಗಿದೆ.

ಇದಲ್ಲದೆ ಮೇ 17ರಂದು ಬೆಳಗಾವಿಯಲ್ಲಿ 20 ಸಾವಿರ ಜನರನ್ನು ಸೇರಿಸಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿ, ನಗರದಾದ್ಯಂತ ಕಟೌಟ್‌ಗಳನ್ನು ಹಾಕಲಾಗಿತ್ತು. ಬಂಧನದ ಬೆನ್ನಲ್ಲೇ ಪಾಲಿಕೆ ಅಧಿಕಾರಿಗಳು ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿ, ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆರೋಪಿಯನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ.

ಐಸ್‌ಕ್ರೀಮ್ ವ್ಯಾಪಾರಿಯಿಂದ ಕೋಟಿ ವ್ಯವಹಾರಿಯವರೆಗೆ

ಮೂಲತಃ ಹುಬ್ಬಳ್ಳಿಯ ಉಣಕಲ್ ನಿವಾಸಿಯಾದ ಶಿವಾನಂದ ನೀಲಣ್ಣವರ ಅವರ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತಂದೆಯ ನಿಧನದ ಬಳಿಕ ಕುಟುಂಬ ಬೆಳಗಾವಿಗೆ ಸ್ಥಳಾಂತರಗೊಂಡಿತ್ತು. ದ್ವಿತೀಯ ಪಿಯುಸಿ ಓದಿರುವ ಶಿವಾನಂದ ಆರಂಭದಲ್ಲಿ ವೈದ್ಯಕೀಯ ಕಾಲೇಜೊಂದರಲ್ಲಿ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದರು.

ನಂತರ 2004ರಿಂದ 2006ರವರೆಗೆ ಆಟೋದಲ್ಲಿ ಫ್ರಿಜ್ ಇಟ್ಟುಕೊಂಡು ಐಸ್‌ಕ್ರೀಮ್ ಮಾರಾಟ ಮಾಡುತ್ತಿದ್ದ ಈತ, ಮುಂದೆ ಸ್ವಂತ ಐಸ್‌ಕ್ರೀಮ್ ಕಾರ್ಖಾನೆಯನ್ನೂ ಸ್ಥಾಪಿಸಿದ್ದ. 2012ರ ಬಳಿಕ ‘ಶಿವಂ ಅಸೋಸಿಯೇಟ್ಸ್’ ಎಂಬ ಹೂಡಿಕೆ ಸಂಸ್ಥೆ ಆರಂಭಿಸಿ, ‘ಅಕ್ಯೂಮೆನ್’ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದ. ಇದೇ ಆ್ಯಪ್ ಮೂಲಕ ಸಾರ್ವಜನಿಕರನ್ನು ಆಕರ್ಷಿಸಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

Leave a Reply

Your email address will not be published. Required fields are marked *