​ಮೇ 1ರಂದು ಹುಬ್ಬಳ್ಳಿಯಲ್ಲಿ ಮಹಿಳಾ ಜನಾಕ್ರೋಶ ಸಭೆ: ಕಾಂಗ್ರೆಸ್ ಕುತಂತ್ರದ ವಿರುದ್ಧ ಬಿಜೆಪಿ ರಣಕಹಳೆ

Spread the love

ಹುಬ್ಬಳ್ಳಿ: ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ನಾರಿ ಶಕ್ತಿ ವಂದನಾ’ ಕಾಯ್ದೆಯ ವಿರುದ್ಧ ಕಾಂಗ್ರೆಸ್ ಪಕ್ಷ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಇದರ ವಿರುದ್ಧ ಪ್ರತಿಭಟಿಸಲು ಮೇ 1ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ‘ಮಹಿಳಾ ಜನಾಕ್ರೋಶ ಸಭೆ’ಯನ್ನು ಹಮ್ಮಿಕೊಂಡಿದೆ. ಈ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

​ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಮಹಿಳಾ ಮೀಸಲಾತಿ ಕಾಯ್ದೆಯ ಕುರಿತು ಕಳೆದ 40 ವರ್ಷಗಳಿಂದ ಚರ್ಚೆ ನಡೆಯುತ್ತಿದ್ದರೂ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದನ್ನು ಜಾರಿಗೆ ತರಲು ಎಂದೂ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಈ ಕಾಯ್ದೆ ತರಲು ಮುಂದಾದರೂ ಕಾಂಗ್ರೆಸ್ ಬೆಂಬಲ ನೀಡಲಿಲ್ಲ. ಯುಪಿಎ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ಬೆಂಬಲದಿಂದ ಬಿಲ್ ಪಾಸ್ ಆದರೂ, ಲೋಕಸಭೆಯಲ್ಲಿ ಕಾಂಗ್ರೆಸ್ ಅದನ್ನು ಮೂಲೆಗುಂಪು ಮಾಡಿತ್ತು. 2023ರಲ್ಲಿ ನಮ್ಮ ಸರ್ಕಾರ ಈ ಕಾಯ್ದೆ ಮಂಡಿಸಿದಾಗ ಅನಿವಾರ್ಯವಾಗಿ ಒಪ್ಪಿಕೊಂಡ ಕಾಂಗ್ರೆಸ್, ಈಗ ಅದರ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದೆ. 1971ರ ಜನಸಂಖ್ಯೆಗೂ ಇಂದಿನ ಜನಸಂಖ್ಯೆಗೂ ಭಾರಿ ವ್ಯತ್ಯಾಸವಿದ್ದು, ಡಿ-ಲಿಮಿಟೇಶನ್ ಮೂಲಕ ಲೋಕಸಭಾ ಸೀಟುಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.

​ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, 1984ರಲ್ಲಿ ಲೋಕಸಭೆಯಲ್ಲಿ ಭಾರಿ ಬಹುಮತವಿದ್ದರೂ ಕಾಂಗ್ರೆಸ್ ಮಹಿಳಾ ಮೀಸಲಾತಿ ಜಾರಿಗೆ ತರಲಿಲ್ಲ. ಈಗ ನಾವು ತರುತ್ತಿರುವ ಕಾನೂನನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಲೋಕಸಭೆಯಲ್ಲಿ ನಮಗೆ ಹೆಚ್ಚಿನ ಸ್ಥಾನಗಳು ಬಂದರೆ ಈ ಕಾನೂನು ತರಲು ಮತ್ತಷ್ಟು ಅನುಕೂಲವಾಗಲಿದೆ ಎಂದರು. ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಅವರು ಮಾತನಾಡಿ, ಮಹಿಳೆಯರು ರಾಜಕೀಯವಾಗಿ ಮುಂದೆ ಬರುವುದನ್ನು ಸಹಿಸದ ಕಾಂಗ್ರೆಸ್ ಷಡ್ಯಂತ್ರದ ವಿರುದ್ಧ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮೇ 1ರ ಸಭೆಯಲ್ಲಿ ಪಾಲ್ಗೊಂಡು ಪಾಠ ಕಲಿಸಬೇಕು ಎಂದು ಕರೆ ನೀಡಿದರು.

​ವಿಭಾಗೀಯ ಪ್ರಭಾರಿ ಜಯತೀರ್ಥ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ಸಿನ ಈ ಕುತಂತ್ರವನ್ನು ಬಯಲಿಗೆಳೆಯಲು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಸಭೆ ನಡೆಸಲಾಗುವುದು ಎಂದರು. ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕಿ ಸೀಮಾ ಮಸೂತಿ ಸೇರಿದಂತೆ ತಿಪ್ಪಣ್ಣ ಮಜ್ಜಗಿ, ವಸಂತ ನಾಡಜೋಶಿ, ಶಿವು ಮೆಣಸಿನಕಾಯಿ, ರಾಜಣ್ಣ ಕೂಡಲಿ, ಎಸ್.ವಿ. ಸಂಕನೂರ, ಲಿಂಗರಾಜ ಪಾಟೀಲ್, ಭರತ ಬೊಮ್ಮಾಯಿ ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *