
ಧಾರವಾಡ: ಜಿಲ್ಲೆಯ ರೈತರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಿದರು.
ರೈತರ ಅಹವಾಲುಗಳು:
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ರೈತ ಸಂಘಟನೆಗಳ ಮುಖಂಡರು ಕಡಲೆ, ಗೋವಿನಜೋಳ, ಸೂರ್ಯಕಾಂತಿ ಹಾಗೂ ಕುಸಬೆ ಖರೀದಿ ಕೇಂದ್ರಗಳ ಆರಂಭ, ಸಕ್ಕರೆ ಕಾರ್ಖಾನೆಗಳ ಕಾರ್ಯಚಟುವಟಿಕೆ, ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಗುಣಮಟ್ಟದ ಬೀಜ-ರಸಗೊಬ್ಬರ ವಿತರಣೆ ಸೇರಿದಂತೆ ಕೃಷಿ ವಲಯ ಎದುರಿಸುತ್ತಿರುವ ಹಲವು ಸವಾಲುಗಳ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ರೈತರ ಅಹವಾಲುಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳಿಗೆ ತಕ್ಷಣ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಹಾಗೂ ಸರ್ಕಾರದ ಹಂತದ ವಿಷಯಗಳ ಬಗ್ಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಫ್ರೂಟ್ಸ್ ಐಡಿ (FID) ಕಡ್ಡಾಯ:
ಸರ್ಕಾರದ ಸೌಲಭ್ಯಗಳನ್ನು ಪಡೆಯಲು ‘ಫ್ರೂಟ್ಸ್ ಐಡಿ’ ಹೊಂದುವುದು ಇನ್ಮುಂದೆ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ಜಿಲ್ಲೆಯ ಒಟ್ಟು 3.21 ಲಕ್ಷ ಜಮೀನುಗಳ ಪೈಕಿ ಈಗಾಗಲೇ 2.47 ಲಕ್ಷ ತಾಕುಗಳು ನೋಂದಣಿಯಾಗಿದ್ದು, ಶೇ. 77 ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಇರುವ ರೈತರು ತಕ್ಷಣವೇ ನೋಂದಣಿ ಮಾಡಿಸಿಕೊಳ್ಳಬೇಕು. ವಿಶೇಷವಾಗಿ, ಪ್ರಸಕ್ತ ಸಾಲಿನಲ್ಲಿ ಫ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಮಾತ್ರ ರಸಗೊಬ್ಬರ ವಿತರಿಸಲು ಸರ್ಕಾರ ಸೂಚನೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:
ಬೆಳೆ ಹಾನಿ ಸಂಭವಿಸಿದಾಗ ವಿಳಂಬ ಮಾಡದೆ ಪರಿಹಾರ ವಿತರಿಸಲು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಕ್ರಮ ವಹಿಸಬೇಕು ಹಾಗೂ ರೈತರು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಮಾರುಕಟ್ಟೆಯಲ್ಲಿ ಉತ್ಪನ್ನ ಮಾರಾಟ ಮಾಡುವಂತೆ ಉತ್ತೇಜಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಎಡಿಸಿ ಗೀತಾ ಸಿ.ಡಿ., ಎಸಿ ಶಾಲಂ ಹುಸೇನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ರೈತ ಮುಖಂಡರಾದ ಚಂದ್ರಗೌಡ ಎಸ್. ಫಕ್ಕೀರಗೌಡ, ಮುತ್ತು ಪಾಟೀಲ, ವೀರೇಶ ಸೊಬರದಮಠ ಹಾಗೂ ವಿವಿಧ ತಾಲ್ಲೂಕುಗಳ ರೈತ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.

