ಕುಂದಗೋಳ:ಬಡವರ ಪಾಲಿನ ಸಂಜೀವಿನಿಯಾಗಬೇಕಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವೊಂದು ಇದ್ದೂ ಇಲ್ಲದಂತಾಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ! ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರವು ಹಗಲು ಮಾತ್ರ ನೆಪಕ್ಕೆ ತೆರೆದು, ರಾತ್ರಿ 7 ಗಂಟೆಯಾಗುತ್ತಿದ್ದಂತೆ ಸರಪಳಿ ಹಾಕಿ ಬೀಗ ಜಡಿದು ಮುಚ್ಚಲ್ಪಡುತ್ತಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ‘ಪಬ್ಲಿಕ್ ಸಮಾಚಾರ’ ಸುದ್ದಿ ವಾಹಿನಿ ಸ್ಥಳಕ್ಕೆ ತೆರಳಿ ರಿಯಾಲಿಟಿ ಚೆಕ್ ನಡೆಸಿದಾಗ, ಈ ಆಘಾತಕಾರಿ ನೈಜ ಸ್ಥಿತಿ ಕಣ್ಣಂದಿರಿಗೆ ಸಾಕ್ಷಿಯಾಗಿದೆ.
ನಾಲ್ಕು ಜನ ಶಾಸಕರನ್ನು ಹಾಗೂ ಸಚಿವರನ್ನು ನೀಡಿದ ಕೀರ್ತಿ ಈ ಗ್ರಾಮಕ್ಕಿದೆ. ಮಾಜಿ ಸಚಿವ ದಿವಂಗತ ಸಿ.ಎಸ್. ಶಿವಳ್ಳಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ಪ್ರಸ್ತುತ ಹಾಲಿ ಶಾಸಕ ಎಂ.ಆರ್. ಪಾಟೀಲ ಅವರಂತಹ ಪ್ರಭಾವಿ ನಾಯಕರನ್ನು ನೀಡಿದ ಈ ಗ್ರಾಮದಲ್ಲೆ ಇಂತಹ ದುಸ್ಥಿತಿ ನಿರ್ಮಾಣವಾಗಿರುವುದು ನಾಚಿಕೆಗೇಡಿನ ಸಂಗತಿ. ಅದರಲ್ಲೂ ಪ್ರಸ್ತುತ ಶಾಸಕ ಎಂ.ಆರ್. ಪಾಟೀಲ ಅವರ ತವರೂರಾದ ಯರಗುಪ್ಪಿಯಲ್ಲೇ ಆಸ್ಪತ್ರೆಗೆ ಈ ಗತಿ ಬಂದಿದ್ದರೆ, ಇಡೀ ತಾಲ್ಲೂಕಿನ ಆರೋಗ್ಯ ವ್ಯವಸ್ಥೆಯ ಗತಿಯೇನು ಎಂಬ ಯಕ್ಷಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ರಾತ್ರಿ ವೇಳೆಯಲ್ಲಿ ಯಾರಿಗಾದರೂ ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ಚಿಕಿತ್ಸೆ ನೀಡಲು ಒಬ್ಬ ವೈದ್ಯರಾಗಲಿ, ಕನಿಷ್ಠ ಒಬ್ಬ ನರ್ಸ್ ಕೂಡ ಆಸ್ಪತ್ರೆಯಲ್ಲಿ ಲಭ್ಯವಿರುವುದಿಲ್ಲ. ‘ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ’ ಎನ್ನುವಂತೆ, ಸರ್ಕಾರ ಬಡವರ ಹಿತದೃಷ್ಟಿಯಿಂದ ಲಕ್ಷಾಂತರ ರೂಪಾಯಿ ಸುರಿದು ಆಸ್ಪತ್ರೆ ಕಟ್ಟಿಸಿದರೂ ಸಿಬ್ಬಂದಿಯ ಉಡಾಫೆಯಿಂದಾಗಿ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಿದ್ದಾರೆ. ಇನ್ನು ಆಸ್ಪತ್ರೆಯ ಒಳಗಡೆ ಲೈಟ್ಗಳನ್ನು ಆನ್ ಮಾಡಿ ಹಾಗೆಯೇ ಬಿಟ್ಟು ಹೋಗಲಾಗಿದ್ದು, ಈ ವಿದ್ಯುತ್ ಬಿಲ್ ಯಾರ ಜೇಬಿನಿಂದ ಪಾವತಿಯಾಗಬೇಕು? ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದು ಅಕ್ಷಮ್ಯ ಅಪರಾಧವಲ್ಲವೇ ಎಂಬ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ.
ಯರಗುಪ್ಪಿ ಸೇರಿದಂತೆ ಸುತ್ತಮುತ್ತಲಿನ ಚಿಕ್ಕನೇರ್ತಿ, ಮುಳ್ಳೊಳ್ಳಿ, ಯರಿನಾರಾಯಣಪುರ ಹಾಗೂ ಹಿರೇನೇರ್ತಿ ಗ್ರಾಮಗಳ ನೂರಾರು ರೋಗಿಗಳು ಮಲೇರಿಯಾ, ಡೆಂಗ್ಯೂ, ಟೈಫಾಯ್ಡ್, ಅಸ್ತಮಾ, ಕ್ಷಯರೋಗ, ರಕ್ತದೊತ್ತಡ ಹಾಗೂ ಮಧುಮೇಹದಂತಹ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ಪಡೆಯಲು ಈ ಕೇಂದ್ರವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಚಿಕಿತ್ಸೆ ನೀಡಬೇಕಾದ ಸಿಬ್ಬಂದಿಯೇ ಸರಪಳಿ ಹಾಕಿ ಬೀಗ ಜಡಿದು ಹೋದರೆ, ತುರ್ತು ಸಂದರ್ಭದಲ್ಲಿ ಬಡ ರೋಗಿಗಳ ಗತಿಯೇನು?
ರಾತ್ರೀ ಪಾಳೆಯದಲ್ಲಿ ರೋಗಿಗಳು ಪ್ರಾಥಮೀಕ ಆರೋಗ್ಯ ಕೇಂದ್ರಕ್ಕೆ ಹುಷಾರ ಇಲ್ಲಾ ಎಂದು ತೋರಿಕೊಳ್ಳಲು ಬಂದು ಯಾರು ಇಲ್ಲದನ್ನು ನೋಡಿ ಡಾಕ್ಟರ್ ಗೆ ಕಾಲ ಮಾಡಿದರೆ ಪೋನ ಕಾಲ ರಿಸಿವ್ ಮಾಡಿ ಮಾತನಾಡಿಲ್ಲ ಎಂಬ ಆರೋಪವು ಸಹ ಕೆಳಿ ಬಂದಿದೆ.
ಇನ್ನಾದರೂ ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಈ ಭ್ರಷ್ಟ ಹಾಗೂ ನಿರ್ಲಕ್ಷ್ಯದ ವ್ಯವಸ್ಥೆಯನ್ನು ಸರಿಪಡಿಸುತ್ತಾರಾ ಅಥವಾ ಬಡವರ ಜೀವದ ಜೊತೆ ಚೆಲ್ಲಾಟವಾಡುವುದನ್ನು ಮುಂದುವರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ

