
ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 41 ರನ್ಗಳಿಂದ ಮಣಿಸಿದ ಟೀಮ್ ಇಂಡಿಯಾ ಫೈನಲ್ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನೊಂದಿಗೆ ಭಾರತ ಸೂಪರ್ ಫೋರ್ ಹಂತದಲ್ಲಿ ಸತತ ಎರಡನೇ ವಿಜಯ ದಾಖಲಿಸಿದ್ದು, ಶ್ರೀಲಂಕಾ ತಂಡ ಟೂರ್ನಿಯಿಂದ ನಿರ್ಗಮಿಸಿದೆ.
ಅಭಿಷೇಕ್ ಶರ್ಮಾ, ಪಾಂಡ್ಯ ಮಿಂಚು
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡಕ್ಕೆ ಯುವ ಆಟಗಾರ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಭರ್ಜರಿ ಆರಂಭ ಒದಗಿಸಿದರು. ಇಬ್ಬರೂ 6.2 ಓವರ್ಗಳಲ್ಲಿ 77 ರನ್ಗಳ ವೇಗದ ಜೊತೆಯಾಟ ಕಟ್ಟಿದರು. ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ಗಳ ನೆರವಿನಿಂದ 75 ರನ್ ಗಳಿಸಿ ಗಮನ ಸೆಳೆದರು. ಶುಭಮನ್ ಗಿಲ್ 29 ರನ್ಗಳ ಕೊಡುಗೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ (2), ತಿಲಕ್ ವರ್ಮಾ (5) ಮತ್ತು ನಾಯಕ ಸೂರ್ಯಕುಮಾರ್ ಯಾದವ್ (5) ಬೇಗನೆ ಔಟಾದರು. ಆದರೆ, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 38 ರನ್ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಬಾಂಗ್ಲಾದೇಶ ಪರ ರಿಷಾದ್ ಹೊಸೈನ್ 2 ವಿಕೆಟ್ ಪಡೆದರು.
ಸೈಫ್ ಹೋರಾಟ ವ್ಯರ್ಥ, ಬೌಲರ್ಗಳ ಜಾದೂ
169 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಆರಂಭದಲ್ಲೇ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸೈಫ್ ಹಸನ್ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಅವರು 51 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 69 ರನ್ ಗಳಿಸಿದರು. ಆದರೆ, ಅವರಿಗೆ ಉಳಿದ ಬ್ಯಾಟರ್ಗಳಿಂದ ಯಾವುದೇ ಬೆಂಬಲ ಸಿಗಲಿಲ್ಲ. ಪರಿಣಾಮ, ಬಾಂಗ್ಲಾದೇಶ 19.3 ಓವರ್ಗಳಲ್ಲಿ 127 ರನ್ಗಳಿಗೆ ಸರ್ವಪತನ ಕಂಡಿತು.
ಭಾರತದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಕುಲದೀಪ್ ಯಾದವ್ 3 ವಿಕೆಟ್ ಪಡೆದರೆ, ಜಸ್ಪ್ರೀತ್ ಬೂಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸೆಮಿಫೈನಲ್ ಮಹತ್ವ ಪಡೆದ ಪಾಕಿಸ್ತಾನ-ಬಾಂಗ್ಲಾ ಪಂದ್ಯ
ಈ ಗೆಲುವಿನಿಂದ ಭಾರತ ಈಗಾಗಲೇ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಇನ್ನುಳಿದ ಒಂದು ಫೈನಲ್ ಸ್ಥಾನಕ್ಕಾಗಿ ಗುರುವಾರ ನಡೆಯುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಸೆಮಿಫೈನಲ್ನ ಮಹತ್ವ ಪಡೆದಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ನಲ್ಲಿ ಭಾರತವನ್ನು ಎದುರಿಸಲಿದೆ.

