‘ಇಂದು ಧರ್ಮಸ್ಥಳ, ನಾಳೆ ಮುರುಘಾಮಠ’: ಎಸ್‌ಐಟಿ ತನಿಖೆ ವಿರುದ್ಧ ಪಾಲಿಕೆ ಸದಸ್ಯ ರಾಮಣ್ಣ ಕೋರವಿ ಆಕ್ರೋಶ

Spread the love

ಧಾರವಾಡ: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಧರ್ಮಸ್ಥಳಕ್ಕೆ ಈಗ ಬಂದಿರುವ ಪರಿಸ್ಥಿತಿ ನಾಳೆ ಧಾರವಾಡದ ಮುರುಘಾಮಠ, ಉಳವಿ ಚೆನ್ನಬಸವೇಶ್ವರ ದೇಗುಲ ಮತ್ತು ಸಿದ್ಧಾರೂಢ ಮಠಕ್ಕೂ ಬರಬಹುದು ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಎಚ್ಚರಿಕೆ ನೀಡಿದರು.

ಸರ್ಕಾರಕ್ಕೆ ರಾಜಣ್ಣ ಕೊರವಿ ಪ್ರಶ್ನೆ
ಧಾರವಾಡದಲ್ಲಿ ಮಾತನಾಡಿದ ರಾಜಣ್ಣ ಕೊರವಿ, “ಧರ್ಮಸ್ಥಳದಲ್ಲಿ ಈಗಾಗಲೇ ಹಲವು ‘ಎಪಿಸೋಡ್‌’ಗಳು ಮುಗಿದಿವೆ. ನಮ್ಮ ಗೃಹ ಸಚಿವರು ಶೇ. 80ರಷ್ಟು ತನಿಖೆ ಮುಗಿದಿದೆ ಎನ್ನುತ್ತಾರೆ. ಅಡುಗೆ ಮಾಡುವವನಿಗೆ ಅನ್ನ ಆಗಿದೆಯೋ ಇಲ್ಲವೋ ಎಂಬುದು ಎರಡು ಅಗುಳು ನೋಡಿದರೆ ಗೊತ್ತಾಗುತ್ತದೆ. ಧರ್ಮಸ್ಥಳದಲ್ಲಿ ಏನೆಲ್ಲಾ ಆಗಿದೆ ಎಂಬುದು ಇಡೀ ದೇಶದ ಜನರಿಗೆ ಈಗ ಗೊತ್ತಾಗಿದೆ. ಆದರೆ, ನಮ್ಮ ಗೃಹ ಸಚಿವರೇ ಮೌನ ವಹಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಎಸ್‌ಐಟಿ ಪೂರ್ಣಗೊಂಡ ತನಿಖಾ ವರದಿಯನ್ನು ಸಾರ್ವಜನಿಕರಿಗೆ ಪ್ರಕಟ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪಸ್ವಾಮಿ ಬಗ್ಗೆ ಕಪ್ಪುಚುಕ್ಕೆ ಇಡುವ ಷಡ್ಯಂತ್ರ ನಡೆದಿದೆ. ಇದರ ಹಿಂದಿರುವವರನ್ನು ಬೇಧಿಸುವುದು ಅತ್ಯಂತ ಮುಖ್ಯ ಎಂದರು.

“ಇದನ್ನು ಹೀಗೆ ಬಿಟ್ಟರೆ, ನಾಳೆ ಮುರುಘಾಮಠ, ಉಳವಿ ಚನ್ನಬಸವೇಶ್ವರ ಮತ್ತು ಸಿದ್ಧಾರೂಢ ಮಠದಲ್ಲೂ ಹೆಣಗಳಿವೆ ಎಂದು ಯಾರಾದರೂ ಹೇಳಬಹುದು. ಅಂತಹವರು ಬಂದರೆ ಮೊದಲು ಆತನ ವಿಚಾರಣೆ ನಡೆಸಬೇಕು. ಎಸ್‌ಐಟಿ ತನಿಖೆ ನೆಪದಲ್ಲಿ ಭಕ್ತರ ಹೃದಯಕ್ಕೆ ಘಾಸಿ ಮಾಡಲಾಗಿದೆ. ಗುಡ್ಡ ಅಗೆದಿರಬಹುದು, ಆದರೆ ಕೋಟಿಗಟ್ಟಲೆ ಭಕ್ತರ ಹೃದಯವನ್ನು ಇವರು ಬಗೆದಿದ್ದಾರೆ” ಎಂದು ಹೇಳಿದರು. ಎಸ್‌ಐಟಿ ವರದಿ ಶೀಘ್ರ ಪ್ರಕಟಿಸದಿದ್ದರೆ ಉಗ್ರ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದರು.

‘ಅಪಪ್ರಚಾರದ ಹಿಂದೆ ಎಡಪಂಥೀಯರ ಕೈವಾಡ’

  • ಸವಿತಾ ಅಮರಶೆಟ್ಟಿ
    ಬಿಜೆಪಿ ಮುಖಂಡೆ ಸವಿತಾ ಅಮರಶೆಟ್ಟಿ ಮಾತನಾಡಿ, ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿಂದೆ ಎಡಪಂಥೀಯರ ಕೈವಾಡ ಇದೆ ಎಂದು ಆರೋಪಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕರೆ ಮೇರೆಗೆ ಈ ಹೋರಾಟ ಆರಂಭವಾಗಿದೆ ಎಂದರು.
    “ಸಿದ್ದರಾಮಯ್ಯ ಸರ್ಕಾರ ಹಿಂದೂ ಮುಂದು ನೋಡದೆ ಎಸ್‌ಐಟಿ ರಚನೆ ಮಾಡಿದೆ. ಯಾರು ಆರೋಪ ಮಾಡಿದ್ದಾರೆಂದು ಹಿನ್ನೆಲೆ ತಿಳಿದುಕೊಂಡು ಎಸ್‌ಐಟಿ ರಚಿಸಬೇಕಿತ್ತು” ಎಂದರು. ಈ ಹಿಂದೆ ತಾನೇ ಭೀಮ ಎಂದು ಹೇಳಿಕೊಂಡಿದ್ದ ಮುಸುಕುಧಾರಿ ವ್ಯಕ್ತಿಯನ್ನು ಎಸ್‌ಐಟಿ ಬಂಧಿಸಿದೆ. ಹಿಂದೂ ಧರ್ಮವನ್ನು ಅಳಿಸಿ ಹಾಕಲು ದೊಡ್ಡ ಹುನ್ನಾರ ನಡೆದಿದೆ. ಧರ್ಮಸ್ಥಳ ಜಾಗೃತ ಸ್ಥಳವಾಗಿದ್ದು, ಅಲ್ಲಿಗೆ ಮುಜುಗರ ತರುವಂತಹ ಕೆಲಸ ನಡೆಯುತ್ತಿದೆ. ಈ ಘಟನೆಯಿಂದ ಹೆಗ್ಗಡೆ ಅವರ ಕುಟುಂಬಕ್ಕೆ ತೀವ್ರ ನೋವಾಗಿದೆ ಎಂದು ಸವಿತಾ ಹೇಳಿದರು.

ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನಾ ರ‍್ಯಾಲಿ
ಬಿಜೆಪಿ ಕಾರ್ಯಕರ್ತರು ಧಾರವಾಡದ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು. ಯಾರೋ ಒಬ್ಬ ವ್ಯಕ್ತಿ ಬಂದು ಹೇಳಿದ್ದಾನೆ ಎಂಬ ಕಾರಣಕ್ಕೆ ಸರ್ಕಾರ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಸಿದ್ದ ಕ್ಷೇತ್ರದ ಹೆಸರು ಕೆಡಿಸಲು ವ್ಯವಸ್ಥಿತ ಹುನ್ನಾರ ನಡೆದಿದೆ. ಕೂಡಲೇ ಎಸ್‌ಐಟಿ ಅಧಿಕಾರಿಗಳು ತಮ್ಮ ವರದಿ ಪ್ರಕಟ ಮಾಡಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

Leave a Reply

Your email address will not be published. Required fields are marked *