
ತೆಲಂಗಾಣ: ವರದಕ್ಷಿಣೆಗಾಗಿ ಪತ್ನಿಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಿದ ನೋಯ್ಡಾ ಘಟನೆಯ ದುಃಖ ಇನ್ನೂ ಮಾಸುವ ಮುನ್ನವೇ, ಅದೇ ರೀತಿಯ ಮತ್ತೊಂದು ಕ್ರೂರ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಕೊಥಗುಡೆಮ್ ಜಿಲ್ಲೆಯಲ್ಲಿ 33 ವರ್ಷದ ಮಹಿಳೆಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ವರದಕ್ಷಿಣೆಗಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಖಮ್ಮಂ ಜಿಲ್ಲೆಯ ವಿಶ್ವನಾಥಪುರದವರಾದ ಲಕ್ಷ್ಮಿ ಪ್ರಸನ್ನ ಅವರ ವಿವಾಹ 2015ರಲ್ಲಿ ಖಾನಖಾನಪೇಟೆಯ ಪೂಲ ನರೇಶ್ ಬಾಬು ಅವರೊಂದಿಗೆ ನಡೆದಿತ್ತು. ಮದುವೆಯ ಸಮಯದಲ್ಲಿ ಲಕ್ಷ್ಮಿ ಅವರ ಕುಟುಂಬ ವರದಕ್ಷಿಣೆಯಾಗಿ ಎರಡು ಎಕರೆ ಮಾವಿನ ತೋಟ, ಅರ್ಧ ಎಕರೆ ಕೃಷಿ ಭೂಮಿ, ₹10 ಲಕ್ಷ ನಗದು ಮತ್ತು ₹10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ನೀಡಿತ್ತು.
ಹಸಿವಿನಿಂದ ಬಳಲಿ ಸಾವನ್ನಪ್ಪಿದ ಲಕ್ಷ್ಮಿ?
ಮದುವೆಯ ಆರಂಭದಲ್ಲಿ ದಂಪತಿ ಚೆನ್ನಾಗಿದ್ದರು. ಆದರೆ, ಅವರು ಅಶ್ವರೋಪೇಟಕ್ಕೆ ಸ್ಥಳಾಂತರಗೊಂಡ ನಂತರ ಲಕ್ಷ್ಮಿ ಅವರ ನರಕಯಾತನೆ ಆರಂಭವಾಯಿತು ಎಂದು ಕುಟುಂಬಸ್ಥರು ದುಃಖತಪ್ತರಾಗಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಲಕ್ಷ್ಮಿಯನ್ನು ಆಕೆಯ ಪತಿ ನರೇಶ್ ಗೃಹ ಬಂಧನದಲ್ಲಿ ಇರಿಸಿದ್ದ. ಆಕೆ ಕುಟುಂಬದವರೊಂದಿಗೆ ಮಾತನಾಡದಂತೆ ಮೊಬೈಲ್ ಫೋನ್ ಕಿತ್ತುಕೊಂಡಿದ್ದ. ಅಲ್ಲದೆ, ಹೆಚ್ಚುವರಿ ವರದಕ್ಷಿಣೆಗಾಗಿ ಲಕ್ಷ್ಮಿಗೆ ಸರಿಯಾಗಿ ಅನ್ನ-ನೀರು ಕೊಡದೆ, ಹಲ್ಲೆ ನಡೆಸಿ ಹಿಂಸೆ ನೀಡುತ್ತಿದ್ದ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.
ಶನಿವಾರ (ಆಗಸ್ಟ್ 23) ನರೇಶ್ ಪೋಷಕರಿಗೆ ಕರೆ ಮಾಡಿ, ಲಕ್ಷ್ಮಿ ಮೆಟ್ಟಿಲುಗಳಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಹೇಳಿದ್ದಾನೆ. ಆಸ್ಪತ್ರೆಗೆ ಬಂದ ಪೋಷಕರು ತಮ್ಮ ಮಗಳು ಹೊಸ ಮತ್ತು ಹಳೆಯ ಗಾಯಗಳಿಂದ ಬಳಲಿ, ಅತಿಯಾದ ಬಳಲಿಕೆಯಿಂದ ಮೃತಪಟ್ಟ ಸ್ಥಿತಿಯಲ್ಲಿರುವುದನ್ನು ಕಂಡು ಮನ ಕಲುಕಿ ಹೋಗಿದ್ದಾರೆ.
ಪ್ರಕರಣ ದಾಖಲು, ತನಿಖೆ ಆರಂಭ
ಮೃತಳ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನರೇಶ್ ಬಾಬು, ಅವರ ತಾಯಿ ವಿಜಯಲಕ್ಷ್ಮಿ, ಸಹೋದರಿ ದಾಸರಿ ಭೂಲಕ್ಷ್ಮಿ ಮತ್ತು ಸೋದರ ಮಾವ ಶ್ರೀನಿವಾಸ್ ರಾವ್ ವಿರುದ್ಧ ಕಿರುಕುಳ ಮತ್ತು ಕ್ರೂರತೆಯ ಆರೋಪ ಹೊರಿಸಲಾಗಿದೆ.
ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ನರೇಶ್ ಬಾಬು ಅವರ ಸೋದರ ಮಾವ ಶ್ರೀನಿವಾಸ್ ರಾವ್ ಆರೋಪಗಳನ್ನು ನಿರಾಕರಿಸಿದ್ದಾರೆ. ಲಕ್ಷ್ಮಿ ರಕ್ತಹೀನತೆ ಮತ್ತು ಥೈರಾಯ್ಡ್ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು, ಹಸಿವು ಮತ್ತು ಕಿರುಕುಳದ ಆರೋಪಗಳು ಆಧಾರರಹಿತ ಎಂದು ಅವರು ಹೇಳಿದ್ದಾರೆ.
ಕೇವಲ ವರದಕ್ಷಿಣೆಗಾಗಿ ಒಂದು ಜೀವ ಹೀಗೆ ಅಮಾನುಷವಾಗಿ ಸಾವನ್ನಪ್ಪಿರುವುದು ಇಡೀ ಸಮಾಜ ತಲೆ ತಗ್ಗಿಸುವಂತಹ ವಿಷಯವಾಗಿದೆ.

